ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

Public TV
2 Min Read
tiktok b

ಬೆಂಗಳೂರು: ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿರುವ ಟಿಕ್‍ಟಾಕ್ ಆ್ಯಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್‍ನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

ನಮ್ಮ ಯುವ ಪೀಳಿಗೆ ಇತ್ತೀಚೆಗೆ ಜಾಸ್ತಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಟಿಕ್‍ಟಾಕ್ ಕೂಡ ಒಂದು. ಇದು ಯಾವ ಮಟ್ಟಕ್ಕೆ ಪ್ರಚಲಿತದಲ್ಲಿ ಇದೆ ಎಂದರೆ ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ಈ ಆ್ಯಪ್ ಅನ್ನು ಬ್ಯಾನ್ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಮೊದಲಿಗೆ 4.6ರ ರೇಟಿಂಗ್‍ನಲ್ಲಿ ಇದ್ದ ಟಿಕ್‍ಟಾಕ್ ಆ್ಯಪ್ ಈಗ 1.3ಕ್ಕೆ ಇಳಿದಿದೆ.

ಟಿಕಾಟಾಕ್ ಚೀನಾದ ಆ್ಯಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್‍ಟಾಕ್ ಅನ್ನು ವಿರೋಧ ಮಾಡುತ್ತಿದ್ದರೆ, ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಟಿಕ್‍ಟಾಕ್ ಬ್ಯಾನ್ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ.

ಟಿಕ್‍ಟಾಕ್ ಆ್ಯಪ್ ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೇಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.

ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದರು.

ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *