ಅಂಫಾನ್ ಚಂಡಮಾರುತಕ್ಕೆ ಒಡಿಶಾ, ಪಶ್ಚಿಮ ಬಂಗಾಳ ತತ್ತರ – 12ಕ್ಕೂ ಹೆಚ್ಚು ಮಂದಿ ಬಲಿ

Public TV
2 Min Read
amphan cyclone main

– ಒಟ್ಟು 8 ಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರ

ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಅಂಫಾನ್ ಚಂಡಮಾರುತ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸುಮಾರು 185 ಕಿ.ಮೀ ವೇಗದಲ್ಲಿ ಪ್ರಬಲವಾದ ಬಿರುಗಾಳಿ ಬೀಸುತ್ತಿರುವ ಪರಿಣಾಮ ಈ ಎರಡು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮರಗಳು, ಕಟ್ಟಡಗಳು ನೆಲಕಚ್ಚಿವೆ.

ಪಶ್ಚಿಮ ಬಂಗಾಳದಲ್ಲಿ 10ರಿಂದ 12 ಮಂದಿ ಚಂಡಮಾರುತದಿಂದ ಆದ ಅನಾಹುತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಚಂಡಮಾರುತದ ಆರ್ಭಟಕ್ಕೆ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಾಶಗೊಂಡಿದ್ದು, ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಇತ್ತ ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ನೆಲಕಚ್ಚಿವೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬುಧವಾರ ಮಧ್ಯಾಹ್ನ 2.30ಕ್ಕೆ ಅಂಫಾನ್ ಚಂಡಮಾರುತವು ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಬಂದು ಅಪ್ಪಳಿಸಿತು. ಮೊದಲು 170 ಕಿಮೀ ವೇಗದಲ್ಲಿದ್ದ ಚಂಡಮಾರುತ ಬಳಿಕ 185 ಕಿಮೀ ವೇಗ ಪಡೆದುಕೊಂಡು ಮುನ್ನುಗ್ಗಿದೆ. ಈ ಹಿನ್ನೆಲೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ. ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಹೌರಾ ಜಿಲ್ಲೆ ಹಾಗೂ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ರಕ್ಷಣಾ ಕಾರ್ಯಗಳಿಗೆಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು(ಎನ್‌ಡಿಆರ್‌ಎಫ್‌) 20 ತಂಡಗಳನ್ನು ಒಡಿಶಾಗೆ ಹಾಗೂ 19 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ರಕ್ಷಣಾ ಕಾರ್ಯಾಚರನೆಗೆ ಕಳುಹಿಸಿದೆ. ಸದ್ಯ ಈ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಇನ್ನೂ 1ರಿಂದ 2 ದಿನ ಆರ್ಭಟಿಸಿ ಚಂಡಮಾರುತ ದುರ್ಬಲಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಿರುಗಾಳಿ ಸಹಿತ ಮಳೆಗೆ ಶೆಡ್‍ಗಳು ನೆಲಸಮವಾಗುತ್ತಿರುವ ದೃಶ್ಯ, ಮಳೆಗೆ ರಸ್ತೆಗಳಲ್ಲಿ ನೀರು ತುಂಬಿ ವಾಹನಗಳು ಮುಳುಗಿರುವ ದೃಶ್ಯಗಳು, ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಬೀಳುತ್ತಿರುವಾಗ ಬೆಂಕಿ ಕಾಣಿಸಿಕೊಂಡ ದೃಶ್ಯ, ಭಾರೀ ಬಿರುಗಾಳಿ ಬಸ್ಸೊಂದನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವನ್ನು ನೋಡಿದಾಗ ಅಂಫಾನ್ ಚಂಡಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಷ್ಟು ಅವಾಂತರ ಸೃಷ್ಟಿಸಿದೆ ಎಂಬುದು ತಿಳಿಯುತ್ತದೆ.

https://twitter.com/Prakharforever/status/1263181032137920513

Share This Article
Leave a Comment

Leave a Reply

Your email address will not be published. Required fields are marked *