ಮಧ್ಯಾಹ್ನ ಬೆಂಗ್ಳೂರಿನಲ್ಲಿ ಕೇಳಿಬಂದ ಶಬ್ಧ ಯುದ್ಧ ವಿಮಾನದ್ದು – ರಕ್ಷಣಾ ಇಲಾಖೆ

Public TV
2 Min Read
sukoi fighter jet 1

ಬೆಂಗಳೂರು: ಮಧ್ಯಾಹ್ನ ಸಿಲಿಕಾನ್ ಸಿಟಿಯ ಹಲವು ಭಾಗದಲ್ಲಿ ಕೇಳಿ ಬಂದ ಶಬ್ಧ ಯುದ್ಧ ವಿಮಾನದ್ದು ಎನ್ನುವುದು ಈಗ ದೃಢಪಟ್ಟಿದೆ.

ಈ ಸಂಬಂಧ ರಕ್ಷಣ ಇಲಾಖೆ ತಿಳಿಸಿದ್ದು, ಏರ್ ಕ್ರಾಫ್ಟ್ ಸಿಸ್ಟಂ ಆಂಡ್ ಟೆಸ್ಟಿಂಗ್ ಎಸ್ಟಾಬ್ಲಿಸ್ಟ್ ಮೆಂಟ್(ಎಎಸ್‍ಟಿಇ) ನ ವಿಮಾನ ಹಾರಾಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಸೂಪರ್ ಸೋನಿಕ್ ವಿಮಾನ ನಗರದಿಂದ ಹೊರಗಡೆ ಹಾರಾಟ ನಡೆಸಿತ್ತು ಎಂದು ತಿಳಿಸಿದೆ.

ಪೈಲಟ್ ಗಳು ಮತ್ತು ಎಂಜಿನಿಯರುಗಳು ವಿಮಾನವನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ 36 ಸಾವಿರ ಮತ್ತು 40 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದಾಗ ಸೋನಿಕ್ ಬೂಮ್ ಕೇಳಿಸಿರಬಹುದು. ಸೋನಿಕ್ ಬೂಮ್ ನಡೆದ ಪ್ರದೇಶದಿಂದ ವ್ಯಕ್ತಿ 65 ರಿಂದ 85 ಕಿ.ಮೀ ದೂರದಲ್ಲಿದ್ದರೂ ಈ ಧ್ವನಿ ಕೇಳಿಸುತ್ತದೆ ಎಂದು ಟ್ವೀಟ್ ಸ್ಪಷ್ಟನೆ ನೀಡಿದೆ.

sukhoi jet india air force

ಮಧ್ಯಾಹ್ನ 1:25ರ ವೇಳೆಗೆ ಈ ಘಟನೆ ನಡೆದಿದ್ದರೂ ಇಷ್ಟು ತಡವಾಗಿ ಯಾಕೆ ಸ್ಪಷ್ಟನೆ ನೀಡಿದ್ದು ಎಂದು ಜನ ಈಗ ಪ್ರಶ್ನೆ ಮಾಡಿ ಕೇಳುತ್ತಿದ್ದಾರೆ.

ಮಧ್ಯಾಹ್ನವೇ ಇದು ವಾಯುಸೇನೆಯ ವಿಮಾನದಿಂದ ಆಗಿರುವ ಶಬ್ಧ ಎನ್ನುವುದು ದೃಢಪಟ್ಟಿತ್ತು. ಆದರೆ ಅಧಿಕೃತವಾಗಿ ಎಲ್ಲಿಯೂ ಪ್ರಕಟವಾಗಿರಲಿಲ್ಲ. ಸಂಜೆಯ ವೇಳೆಗೆ ಭಾರತೀಯ ವಾಯುಸೇನೆ ಹೇಳಿಕೆ ಬಿಡುಗಡೆ ಮಾಡಿ, ಏರ್ ಕ್ರಾಫ್ಟ್ ಆಂಡ್ ಸಿಸ್ಟಂ ಟೆಸ್ಟಿಂಗ್ ಮತ್ತು ಎಚ್‍ಎಎಲ್ ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿರಬಹುದು ಎಂದು ತಿಳಿಸಿತ್ತು. ಆದರೆ ಹೇಳಿಕೆಯ ಶಬ್ಧದ ಮೂಲದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಸ್ಪಷ್ಟನೆ ನೀಡುವ ಮೂಲಕ ಎದ್ದಿದ್ದ ಎಲ್ಲ ಗೊಂದಲಗಳಿಗೆ ರಕ್ಷಣಾ ಇಲಾಖೆ ತೆರೆ ಎಳೆದಿದೆ.

ಮಧ್ಯಾಹ್ನ 1.20ರ ಸಮಯದಲ್ಲಿ ಬೆಂಗಳೂರಿನಲ್ಲಿ ಕೇಳಿಸಿಕೊಂಡದ್ದು ಸುಖೋಯ್ ವಿಮಾನದ ಸೋನಿಕ್ ಬೂಮ್. ಫೈಟರ್ ವಿಮಾನ 1,230 ಕಿ.ಮೀ ವೇಗ ತಲುಪಿ ಹೇಗೆ ಆಗಿತ್ತು ಎಂದು ವಿಂಗ್ ಕಮಾಂಡರ್ ಸುದರ್ಶನ್ ಅವರು ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದರು. ಜನಪ್ರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ, ನೀವು ಕೇಳಿದ್ದು, ಸೂಪರ್ ಸೋನಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟದ ಸದ್ದು. ಗುಡುಗುಗಿಂತಲೂ ತೀವ್ರ ಎಂದು ಪೋಸ್ಟ್ ಹಾಕಿದ್ದರು.

Sukhoi Su 30 MKI Fighter

ನಡೆದಿದ್ದು ಏನು?
ಮಧ್ಯಾಹ್ನ ಮಧ್ಯಾಹ್ನ 1.20ರ ಸುಮಾರಿಗೆ ಎದೆ ಝಲ್ ಎನ್ನಿಸುವ ದೊಡ್ಡ ಶಬ್ಧ ಕೇಳಿಬಂತು. ಇಂದಿರಾನಗರ, ಕಲ್ಯಾಣನಗರ, ಕೆಆರ್‍ಪುರ, ಟಿನ್‍ಫ್ಯಾಕ್ಟ್ರಿ, ರಾಮಮೂರ್ತಿನಗರ, ಮಾರತ್ತಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಬನಶಂಕರಿ, ವಸಂತಪುರಕ್ಕೆ ಶಬ್ಧ ಕೇಳಿಸಿತ್ತು

ಏನಿದು ಸೋನಿಕ್ ಬೂಮ್?
ಸಮುದ್ರ ಮಟ್ಟದಲ್ಲಿ ಶಬ್ದಗಳ ತರಂಗಗಳ ವೇಗ ಸುಮಾರು ಗಂಟೆಗೆ 1,235 ಕಿಮೀ ಇರುತ್ತದೆ. ಮೇಲೆ ಮೇಲೆ ಹಾರುತ್ತಾ ಏರಿದಾಗ ಈ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಈ ವೇಗವನ್ನು ಒಂದು ಮ್ಯಾಕ್ ಎನ್ನುತ್ತಾರೆ. ನಮ್ಮ ಫೈಟರ್ ವಿಮಾನಗಳು ಈ ವೇಗದ ಆಸುಪಾಸಿನಲ್ಲಿ ಹಾರಾಡುತ್ತಿರುವಾಗ ಗಾಳಿಯ ಹಲವಾರು ಪದರಗಳು ಒಂದರ ಮೇಲೆ ಒಂದರಂತೆ ಏರುತ್ತಾ ಹೋಗುತ್ತವೆ. ಈ ವಿಮಾನದ ವೇಗ ಒಂದು ಮ್ಯಾಕ್‍ಗಿಂತಾ ಹೆಚ್ಚಾದಾಗ ಈ ವಾಯು ಪದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತವೆ. ಆಗ ವಿಮಾನದ ಹಿಂದೆ ಉಂಟಾದ ನಿರ್ವಾತದಲ್ಲಿ ಅಪ್ಪಳಿಸಿದಾಗ ಉಂಟಾಗುವ ಶಬ್ಧವೇ ಸೂಪರ್ ಸೋನಿಕ್ ಬೂಮ್ ಎಂದು ವಿಂಗ್ ಕಮಾಂಡರ್ ಸುದರ್ಶನ್ ತಿಳಿಸಿದ್ದಾರೆ.

ಸೂಪರ್ ಸೋನಿಕ್ ವೇಗವನ್ನು ಮ್ಯಾಕ್ ಸಂಖ್ಯೆಯಲ್ಲಿ ಹೇಳಲಾಗುತ್ತದೆ. ಮ್ಯಾಕ್ 1 ಎಂದರೆ ಧ್ವನಿಯ ವೇಗ, ಮ್ಯಾಕ್ 2 ಆ ವೇಗದ ಎರಡರಷ್ಟು. ವಿಮಾನದ ಎತ್ತರದಲ್ಲಿನ ಧ್ವನಿಯ ವೇಗದಿಂದ ವಿಮಾನದ ವೇಗವನ್ನು ವಿಭಜಿಸುವುದರಿಂದ ಮ್ಯಾಕ್ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಯುದ್ಧ ವಿಮಾನಗಳ ವಾಯುನೆಲೆಯಲ್ಲಿ ಸೂಪರ್ ಸೋನಿಕ್ ಬೂಮ್ ಸಾಮಾನ್ಯ. ಬಹಳಷ್ಟು ಸಲ ಕಿಟಕಿಯ ಗಾಜುಗಳು ಒಡೆದು ಹೋಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *