ಚೀನಾ ವೈರಸ್‍ಗಿಂತಲೂ ಭಾರತದ ವೈರಸ್ ಮಾರಕ – ನೇಪಾಳ ಪ್ರಧಾನಿಯಿಂದ ವಿವಾದಾತ್ಮಕ ಮಾತು

Public TV
2 Min Read
NEPAL PM

– ಭಾರತದ ಭೂ-ಭಾಗ ಸೇರಿಸಿದ ಹೊಸ ನಕ್ಷೆಗೆ ನೇಪಾಳ ಸಂಸತ್ ಅನುಮೋದನೆ
– ಹೊಸ ನಕ್ಷೆಗೆ ಬಿಡುಗಡೆಗೆ ಪ್ರಧಾನಿ ಕೆಪಿ ಒಲಿ ಸಮರ್ಥನೆ

ಕಠ್ಮಂಡು: ನೇಪಾಳ ಹಾಗೂ ಭಾರತದ ನಡುವೆ ದಶಕಗಳಿಂದಲೂ ಉತ್ತಮ ಬಾಂಧವ್ಯ ಹೊಂದಿದೆ. ಆದರೆ ಸದ್ಯ ಚೀನಾ ಬೆಂಬಲ ಪಡೆದಿರುವ ನೇಪಾಳ ಸರ್ಕಾರದ ಪ್ರಧಾನಿ ಕೆಪಿ ಶರ್ಮಾ ಒಲಿ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೇಪಾಳದಲ್ಲಿ ಕೋವಿಡ್-19 ಹೆಚ್ಚಾಗಲು ಭಾರತವೇ ಕಾರಣ ಎಂದಿರುವ ಕೆಪಿ ಶರ್ಮಾ ಒಲಿ, ಭಾರತದಿಂದ ಬರುತ್ತಿರುವ ವೈರಸ್, ಚೀನಾ ಹಾಗೂ ಇಟಲಿ ವೈರಸ್‍ಗಿಂತಲೂ ಪ್ರಮಾದಕರ ಎಂದು ಹೇಳಿದ್ದಾರೆ. ಅಕ್ರಮ ಮಾರ್ಗಗಳ ಮೂಲಕ ಭಾರತದಿಂದ ಜನರು ತಮ್ಮ ದೇಶಕ್ಕೆ ಪ್ರವೇಶ ಮಾಡುತ್ತಿರುವುದೇ ಕೊರೊನಾ ಸೋಂಕು ಹೆಚ್ಚಾಗಲು ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

corona 1 4

ಭಾರತ ಸರ್ಕಾರ ಆರೋಗ್ಯ ಪರೀಕ್ಷೆಯನ್ನು ಸರಿಯಾಗಿ ನಡೆಸದೆ ಜನರನ್ನು ಕರೆತರುತ್ತಿದೆ. ಕೆಲ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷ ನಾಯಕರು ಇದಕ್ಕೆ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಎಂದು ಸಂಸತ್‍ನಲ್ಲಿ ಒಲಿ ಹೇಳಿಕೆ ನೀಡಿದ್ದಾರೆ.

ಇತ್ತ ಭಾರತ ಭೂ ಪ್ರದೇಶಗಳನ್ನು ಸೇರಿಸಿ ಹೊಸದಾಗಿ ನೇಪಾಳ ನಕ್ಷೆಯನ್ನು ಬಿಡುಗಡೆ ಮಾಡಿರುವ ಸರ್ಕಾರ ಕ್ರಮವನ್ನು ಒಲಿ ಸಮರ್ಥನೆ ಮಾಡಿಕೊಂಡಿದ್ದು, ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳನ್ನು ಭಾರತದಿಂದ ಮರಳಿ ವಶಕ್ಕೆ ಪಡೆಯುವುದಾಗಿ ಸಂಸತ್‍ನಲ್ಲಿ ಹೇಳಿಕೆ ನೀಡಿದ್ದಾರೆ. ಹೊಸ ನಕ್ಷೆಗೆ ನೇಪಾಳ ಸಂಸತ್‍ನಲ್ಲಿ ಅನುಮೋದನೆಯನ್ನು ನೀಡಲಾಗಿದೆ.

Nepal

ಭಾರತ ಹಾಗೂ ನೇಪಾಳ ನಡುವೆ 1,800 ಕಿಮೀ ಗಡಿ ಪ್ರದೇಶವಿದೆ. 1816ರ ಬ್ರಿಟಿಷ್ ಒಪ್ಪಂದ ಅನ್ವಯ ಲಿಪುಲೆಖ್ ತನ್ನದೇ ಎಂದು ನೇಪಾಳವಾದ ಮಂಡಿಸುತ್ತಿದೆ. 1962ರಲ್ಲಿ ಚೀನಾ ಯುದ್ಧದ ಬಳಿಕ ಕಾಲಾಪಾಣಿ, ಲಿಂಪಿಯಾಧುರಾ ಪ್ರದೇಶಗಳನ್ನು ಭಾರತ ಸೇನೆ ವಶಕ್ಕೆ ಪಡೆದಿದೆ. ಆ ಪ್ರದೇಶಗಳು ಕೂಡ ತಮ್ಮದೇ ಎಂದು ನೇಪಾಳ ಪ್ರಧಾನಿ ಹೇಳಿದ್ದಾರೆ.

ಕೈಲಾಸ ಮಾನಸ ಸರೋವರ ಮಾರ್ಗಕ್ಕಾಗಿ ಲಿಪುಲೆಖ್ ಪ್ರದೇಶದಲ್ಲಿ ಭಾರತ ರಸ್ತೆ ಮಾರ್ಗವನ್ನು ನಿರ್ಮಿಸಿತ್ತು. ಅಲ್ಲದೇ ಮೇ 8ರಂದು ಈ ಮಾರ್ಗದ ಉದ್ಘಾಟನೆ ಕೂಡ ಆಗಿತ್ತು. ಬಳಿಕ ಆ ಮಾರ್ಗದಲ್ಲಿ ಸೆಕ್ಯೂರಿಟಿ ಚೆಕ್ ಪೋಸ್ಟ್ ಕೂಡ ನಿರ್ಮಿಸಿತ್ತು. ಆದರೆ ನೇಪಾಳದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ, ಈ ಮಾರ್ಗ ಉತ್ತರಖಂಡ್‍ನ ಪಿತೋರ್ ಗಢ ಜಿಲ್ಲೆಯ ಮೂಲಕ ಸಾಗುತ್ತದೆ. ಈ ಮಾರ್ಗವನ್ನು ಸಂಪೂರ್ಣವಾಗಿ ಭಾರತದ ಭೂ ಪ್ರದೇಶದಲ್ಲೇ ನಿರ್ಮಿಸಲಾಗಿದೆ ಎಂದು ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *