‘ನನ್ನ ನಿರ್ಣಯವೇ ಕ್ರಿಕೆಟ್ ಕೆರಿಯರ್‌ಗೆ ಮುಳುವಾಯಿತು’: ರಾಬಿನ್ ಉತ್ತಪ್ಪ

Public TV
2 Min Read
Robin Uthappa

ಮುಂಬೈ: ಟೆಸ್ಟ್ ಕ್ರಿಕೆಟ್ ಆಡುವ ಲಕ್ಷ್ಯದಿಂದ 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್‍ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂಬ ನಿರ್ಣಯವೇ ತನ್ನ ಕ್ರಿಕೆಟ್ ಕೆರಿಯರ್‌ಗೆ ಮುಳುವಾಯಿತು ಎಂದು ಟೀಂ ಇಂಡಿಯಾ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಈ ತಪ್ಪಿನಿಂದಲೇ ತನ್ನ ಸ್ಫೋಟಕ ಬ್ಯಾಟಿಂಗ್‍ಗೆ ಬ್ರೇಕ್ ಬಿತ್ತು. ಪರಿಣಾಮ ಕೆರಿಯರ್ ಗ್ರಾಫ್ ಕೆಳಗಿಳಿಯಿತು ಎಂದು ಉತ್ತಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ ಪರ ಆಡುತ್ತಿರುವ ಉತ್ತಪ್ಪ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸೆಷನ್‍ನಲ್ಲಿ ತಮ್ಮ ವೃತ್ತಿ ಜೀವನ ಕುರಿತು ಆಸಕ್ತಿಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

Robin uthappa a

ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಮುಖ್ಯ ಗುರಿಯಾಗಿತ್ತು. ಇದರಂತೆ ನಾನು 20-21ರ ವಯಸ್ಸಿನಲ್ಲೇ ಪ್ರಯತ್ನ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ ನಾನು 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡಿದ್ದೆ. ಅಲ್ಲಿವರೆಗೂ ಸ್ಥಿರವಾಗಿ ಸಾಗುತ್ತಿದ್ದ ನನ್ನ ಬ್ಯಾಟಿಂಗ್ ಸ್ಪೀಡ್ ಕಡಿಮೆ ಆಗಿತ್ತು. ಆದರೆ ನಾನು ಜೀವನದ ಯಾವುದೇ ನಿರ್ಧಾರದ ಕುರಿತು ಪಶ್ಚಾತ್ತಾಪ ಪಡುವುದು ಬೇಡ ಎಂದು ಕೊಂಡಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ. ಈ ಕಾರಣದಿಂದಲೇ ಕೋಚ್ ಬಳಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡು ಉತ್ತಮ ಪ್ರದರ್ಶನ ನೀಡಬೇಕೆಂದುಕೊಂಡಿದ್ದೇನೆ ಎಂದು ಉತ್ತಪ್ಪ ವಿವರಿಸಿದ್ದಾರೆ.

ಇದೇ ವೇಳೆ 2007ರ ವಿಶ್ವಕಪ್ ಗೆಲುವಿನ ಸಂಭ್ರಮದ ಬಗ್ಗೆ ಮಾತನಾಡಿರುವ ಉತ್ತಪ್ಪ, ವಿಶ್ವಕಪ್ ಗೆಲುವಿನಲ್ಲಿ ನೀವು ಒಂದು ಭಾಗವಾಗಿರುವುದರ ಅನುಭವವೇ ಬೇರೆಯಾಗಿರುತ್ತದೆ. 1983ರ ಬಳಿಕ ಮೊದಲ ವಿಶ್ವಕಪ್ ಗೆದ್ದದ್ದು ಬಹಳ ನಿರಾಳ ತಂದು ಕೊಟ್ಟಿತ್ತು. ವಿಶ್ವಕಪ್ ಗೆದ್ದ ಭಾರತಕ್ಕೆ ಹಿಂದಿರುಗಿದ್ದ ನಮಗೆ ಭವ್ಯ ಸ್ವಾಗತ ಲಭಿಸಿತ್ತು. ಅಂದು ಮೂರು ದಿನಗಳ ಕಾಲ ನಾನು ನಿದ್ದೆ ಮಾಡಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.

Robin uthappa b

2006ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಉತ್ತಪ್ಪ, ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 2007ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಉತ್ತಪ್ಪ ಆ ಬಳಿಕ ತಂಡದಿಂದ ದೂರವಾಗಿದ್ದರು. 13 ವರ್ಷಗಳ ವೃತ್ತಿ ಜೀವನದಲ್ಲಿ ಉತ್ತಪ್ಪ 46 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಜಿಂಬಾಂಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಪ್ಪ ಅಂತಿಮ ಪಂದ್ಯವನ್ನು ಆಡಿದ್ದರು. ಉಳಿದಂತೆ ಉತ್ತಮ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಮೊದಲ ಅರ್ಧ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *