ಕೊರೊನಾ ಸೋಂಕಿತ ಶಿರಹಟ್ಟಿಯಲ್ಲಿ ಓಡಾಟ-ಹೆಚ್ಚಾಯ್ತು ಆತಂಕ

Public TV
1 Min Read
Shirahatti Corona

-ಚೆನ್ನೈನಿಂದ ಬಂದ 17 ಜನರಲ್ಲಿ ಓರ್ವನಿಗೆ ಸೋಂಕು
-ಕ್ವಾರಂಟೈನ್ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

ಗದಗ: ಕೊರೊನಾ ಸೋಂಕಿತ (ರೋಗಿ 1178) ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಓಡಾಟ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚೆನ್ನೈನಿಂದ ಬಂದಿದ್ದ 17 ಜನರಲ್ಲಿ ಓರ್ವನಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇದೀಗ ಶಿರಹಟ್ಟಿ ಪಟ್ಟಣದ ಜನ ಆತಂಕಕ್ಕೆ ಒಳಗಾಗಿದ್ದಾರೆ.

Shirahatti 4

17 ಜನರ ಕುಟುಂಬ ಚೆನ್ನೈನಿಂದ ಗದಗ ಜಿಲ್ಲೆಯ ಶಿರಹಟ್ಟಿಗೆ ಸ್ವಂತ ವಾಹನದಲ್ಲಿ ಬಂದಿದ್ದರು. ಈ ವೇಳೆ ಇವರನ್ನು ತಡೆದ ಅಧಿಕಾರಿಗಳು ಎಲ್ಲರನ್ನು ಶಿರಹಟ್ಟಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ 17 ಜನರ ಪೈಕಿ ಕೇವಲ ಆರು ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದಾರೆ. ವಾಹನದಲ್ಲಿ ಬಂದ ಮಕ್ಕಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

Shirahatti 5

ಆರು ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ ಬಳಿಕ 17 ಜನರಿಗೆ ಶಿರಹಟ್ಟಿ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗುವಂತೆ ಹೇಳಿ ಕಳುಹಿಸಿದ್ದಾರೆ. 17 ಜನರ ಜೊತೆ ಯಾವ ಅಧಿಕಾರಿಯೂ ತೆರಳಿಲ್ಲ. ಹೀಗಾಗಿ 17 ಜನರಲ್ಲಿ ಓರ್ವ ಶಿರಹಟ್ಟಿ ಪಟ್ಟಣದಲ್ಲಿ ಸುತ್ತಾಡಿ ಮಕ್ಕಳಿಗೆ ಆಹಾರ ಮತ್ತು ಅವಶ್ಯಕ ವಸ್ತುಗಳನ್ನು ಖರೀದಿಸಿಕೊಂಡು ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದಾನೆ.

Shirahatti 6

ಚೆನ್ನೈನಿಂದ ಬಂದು ಕೋವಿಡ್-19 ಪರೀಕ್ಷೆಗೆ ಒಳಗಾದ ವ್ಯಕ್ತಿಯನ್ನು ಪಟ್ಟಣದಲ್ಲಿ ಸಂಚರಿಸಲು ಅಧಿಕಾರಿಗಳು ಹೇಗೆ ಅವಕಾಶ ನೀಡಿದ್ರು ಎಂದು ಶಿರಹಟ್ಟಿ ನಿವಾಸಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಪರೀಕ್ಷೆಯ ಬಳಿಕ ಎಲ್ಲರನ್ನು ಅಧಿಕಾರಿಗಳ ಅಥವಾ ಪೊಲೀಸರ ನೇತೃತ್ವದಲ್ಲಿ ಕ್ವಾರಂಟೈನ್ ಕೇಂದ್ರ ಶಿಫ್ಟ್ ಮಾಡಬೇಕಿತ್ತು. ಅವರಿಗೆ ತೆರಳಲು ಸೂಚಿಸಿದ್ದರಿಂದ ಸೋಂಕಿತ ಪಟ್ಟಣದಲ್ಲಿ ಸುತ್ತಾಡಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shirahatti 2

ಕ್ವಾರಂಟೈನ್ ಕೇಂದ್ರದಲ್ಲಿಯೂ ಈ ಎಲ್ಲರನ್ನು ಒಂದೇ ರೂಮಿನಲ್ಲಿ ಇರಿಸಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನುಳಿದ 11 ಜನರನ್ನು ಕೊರೊನಾ ಪರೀಕ್ಷೆಗೆ ಏಕೆ ಒಳಪಡಿಸಲಿಲ್ಲ. ಹೊರ ರಾಜ್ಯದಿಂದ ಬಂದವನ್ನು ಸರಿಯಾಗಿ ಕ್ವಾರಂಟೈನ್ ಮಾಡುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *