ವಿದೇಶಗಳಿಗಿಂತ ನಮ್ಮೂರೇ ಸಾಕು: ಸೌಂದರ್ಯ ಜಯಮಾಲಾ

Public TV
3 Min Read
SOUNDARYA JAYAMALA 1

ಬೆಂಗಳೂರು: ವಿದೇಶಕ್ಕೆ ಹೋಗಿ ಬಂದವರೆಂದರೆ ಪ್ರತಿಷ್ಟೆಯ ಪ್ರಶ್ನೆಯಾಗಿತ್ತು. ಆದರೆ ಇದೀಗ ವಿದೇಶಕ್ಕೆ ಹೋಗಿ ಬಂದವರೆಂದರೆ ದೂರ ಉಳಿಯುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಕೊರೊನಾ ಮಾಯೆ. ವಿದೇಶದಲ್ಲಿ ಸಿಲುಕಿದವರ ಸ್ಥಿತಿ ಹೇಗಿತ್ತು, ಯಾವ ರೀತಿಯ ತೊಂದರೆ ಅನುಭವಿಸಿದರು ಎಂದು ಅವರ ಬಾಯಿಂದಾನೇ ಕೇಳಿದರೆ ಗೊತ್ತಾಗುತ್ತದೆ. ವಿದೇಶದಲ್ಲಿ ಪಟ್ಟ ಕಷ್ಟ, ಪಡಿಪಾಟಲು ಹೇಳತೀರದು. ಆ ಸಂದರ್ಭವನ್ನು ಇದೀಗ ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಪುತ್ರಿ ಸೌಂದರ್ಯ ಜಯಮಾಲಾ ಅವರು ವಿವರಿಸಿದ್ದಾರೆ.

soundaryajay 72370803 698357093990349 9102256885747954226 n

ಕೊರೊನಾ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ನೂರಾರು ಜನ ಭಾರತೀಯರು ವಿವಿಧ ದೇಶಗಳಲ್ಲಿ ಸಿಲುಕಿದ್ದಾರೆ. ಇವರನ್ನು ತವರಿಗೆ ಕರೆತರಲು ಸರ್ಕಾರ ಸಹ ಸಾಹಸಪಡುತ್ತಿದ್ದು, ಒಂದೇ ಭಾರತ್ ಮಿಷನ್ ಮೂಲಕ ಏರ್‍ಲಿಫ್ಟ್ ಮಾಡಲಾಗುತ್ತಿದೆ. ಆದರೂ ವಿದೇಶಗಳಲ್ಲಿ ಸಿಲುಕಿದವರ ಸ್ಥಿತಿ ಹೇಳತೀರದಾಗಿದೆ. ಇಂಗ್ಲೆಂಡ್‍ನಲ್ಲಿ ಸಿಲುಕಿದ್ದ ಜಯಮಾಲಾ ಪುತ್ರಿ ಸೌಂದರ್ಯ ಜಯಮಾಲಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಳೆದೆರಡು ತಿಂಗಳು ಅನುಭವಿಸಿದ ಯಾತನೆ ನೆನಸಿಕೊಂಡರೆ ಮತ್ತೆ ಯಾವತ್ತೂ ಬೇರೆ ದೇಶಕ್ಕೆ ಹೋಗಬಾರದು. ವಿದೇಶಗಳಿಗಿಂತ ನಮ್ಮೂರೇ ಸಾಕು ಎಂದೆನಿಸಿದೆ ಎಂದು ಸೌಂದರ್ಯ ಜಯಮಾಲಾ ನಿಟ್ಟುಸಿರು ಬಿಟ್ಟಿದ್ದಾರೆ.

b467c66b8767fe9f2ea11d5cb8af6cfb

ಇಂಗ್ಲೆಂಡ್‍ನ ವೇಲ್ಸ್ ನ ‘ಸ್ವಾನ್‍ಸೀ ವಿವಿ’ ಯಲ್ಲಿ ಅಂತಿಮ ವರ್ಷದ ಬಿಎಸ್‍ಸಿ(ಬಾಟನಿ) ಆನರ್ಸ್ ವ್ಯಾಸಂಗ ಮಾಡುತ್ತಿದ್ದೆ. ಫ್ರೆಂಡ್ ಜೊತೆ ಅಲ್ಲಿಯೇ ಅಪಾರ್ಟ್‍ಮೆಂಟ್‍ವೊಂದರಲ್ಲಿ ಬಾಡಿಗೆಗೆ ನೆಲೆಸಿದ್ದೆವು.

ನಿರಾಶ್ರಿತಳಾಗಿ ಉಳಿದುಕೊಂಡಿದ್ದೆ

ಇತ್ತೀಚೆಗೆ ಕೊರೊನಾದಿಂದಾಗಿ ಇಂಗ್ಲೆಂಡ್‍ನಲ್ಲಿ ಏಕಾಏಕಿ ಲಾಕ್‍ಡೌನ್ ಹೇರಲಾಗಿತ್ತು. ಇದರಿಂದಾಗಿ ಎರಡು ತಿಂಗಳುಗಳ ಕಾಲ ಎಲ್ಲೂ ಹೊರಹೋಗದಂತೆ ಬಂಧಿಯಾದ್ದೆವು, ತುಂಬಾ ಭಯವಾಗಿತ್ತು. ಅಲ್ಲದೆ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆ, ವಿದೇಶಿ ವಿದ್ಯಾರ್ಥಿಗಳು ಹೊರ ಹೋಗದಂತೆ ನಿರ್ಬಂಧ ಹೇರಲಾಯಿತು. ಇದರ ಬೆನ್ನಲ್ಲೇ ನಮ್ಮ ವಿವಿಯ ಇಬ್ಬರು ಪ್ರೊಫೆಸರ್‍ಗಳು ಹಾಗೂ ಒಬ್ಬ ವಿದ್ಯಾರ್ಥಿ ಕೂಡ ಮೃತಪಟ್ಟರು. ಇನ್ನೂ ಭಯದ ವಾತಾವರಣ ನಿರ್ಮಾಣವಾಯಿತು. ಅಲ್ಲದೆ ಇಡೀ ವಿವಿಯನ್ನು ಸೀಲ್‍ಡೌನ್ ಮಾಡಲಾಯಿತು. ಹೀಗಾಗಿ ಮಾರ್ಚ್ 22ರಂದು ದುಬೈ ಮೂಲಕ ಬೆಂಗಳೂರಿಗೆ ಬರುವ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ಅಲ್ಲಿಯೂ ಪ್ರಯಾಣ ನಿರ್ಬಂಧಿಸಲಾಯಿತು. ಇದರಿಂದ ಮತ್ತೆ ಲಂಡನ್‍ಗೆ ಬರಬೇಕಾದ ಪರಿಸ್ಥಿತಿ ಎದುರಾಯಿತು. ಭಾರತಕ್ಕೆ ಹಿಂದಿರುಗುವ ಹಿನ್ನೆಲೆ ಬಾಡಿಗೆ ಮನೆ ಸಹ ಖಾಲಿ ಮಾಡಿದ್ದೆವು. ಹೀಗಾಗಿ ಲಂಡನ್ ವಿಮಾನ ನಿಲ್ದಾಣದಲ್ಲೇ ನಿರಾಶ್ರಿತಳಾಗಿ ಉಳಿಯುವಂತಾಯಿತು ಎಂದು ವಿದೇಶದಲ್ಲಿ ಪಟ್ಟ ಕಷ್ಟವನ್ನು ನೆನಪು ಮಾಡಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಹೆಚ್ಚು ದಿನ ಇರಲು ಸಾಧ್ಯವಾಗದ ಕಾರಣ, ಕುವೈತ್‍ನ ಸ್ನೇಹಿತೆಯ ಸಹಾಯದಿಂದ ಮತ್ತೆ ಬಾಡಿಗೆ ಮನೆ ಮಾಲೀಕರಿಗೆ ವಿಷಯ ಮುಟ್ಟಿಸಿದೆ. ನಂತರ ಮನೆಗೆ ತೆರಳಿದೆ. ಆದರೆ ಅದಾಗಲೇ ವಿದ್ಯುತ್, ನೀರು, ಇಂಟರ್‍ನೆಟ್, ಫೋನ್ ಸೇರಿದಂತೆ ಎಲ್ಲ ರೀತಿಯ ಸಂಪರ್ಕ ಕಡಿತಗೊಳಿಸಲಾಗಿತ್ತು. ಇರುವುದರಲ್ಲೇ ನೆಮ್ಮದಿ ಕಂಡುಕೊಂಡ ನನಗೆ, ಸ್ನೇಹಿತೆ ಸಹಾಯ ಮಾಡಿದಳು. ಹೀಗೆ ಭಯದಲ್ಲೇ ದಿನದೂಡುತ್ತಿರುವಾಗ ಕೇಂದ್ರ ಸರ್ಕಾರದಿಂದ ಏರ್‍ಲಿಫ್ಟ್ ಸುದ್ದಿ ಬಂತು. ಈ ಹಿಂದೆ ಕೂಡ ಇದೇ ರೀತಿಯ ಸುದ್ದಿಗಳು ಹರಿದಾಡಿದ್ದರಿಂದ ನಾನು ಮತ್ತೆ ಸುಳ್ಳು ಸುದ್ದಿ ಎಂದುಕೊಂಡಿದ್ದೆ. ಆದರೆ ಏರ್ ಇಂಡಿಯಾ ವಿಮಾನ ಸಂಸ್ಥೆಯಿಂದ ಕರೆ ಬಂದಾಗ ಹೋದ ಜೀವ ಬಂದಂತಾಯಿತು. ಅಲ್ಲದೆ ಲಂಡನ್‍ನಿಂದ ಬೆಂಗಳೂರಿಗೆ ಹೊರಟ ಮೊದಲ ವಿಮಾನದಲ್ಲೇ ನನಗೆ ಟಿಕೆಟ್ ಸಹ ಲಭಿಸಿತ್ತು. ಹೀಗಾಗಿ ಖುಷಿ ಇಮ್ಮಡಿಯಾಯಿತು. ನಂತರ ವಿಮಾನ ಏರಿ ಹೇಗೋ ಬೆಂಗಳೂರಿಗೆ ಬಂದಿಳಿದೆ. ಸದ್ಯ ಬೆಂಗಳೂರಿನ ಹೋಟೆಲ್‍ವೊಂದರಲ್ಲಿ ಕ್ವಾರಂಟೈನ್‍ನಲ್ಲಿದ್ದೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *