ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗ ಸೂಚಿಗಳ ರಚನೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಸಂಜೆ 4:30 ಕ್ಕೆ ಸಭೆ ನಡೆಯಲಿದೆ.
ಸಭೆಯಲ್ಲಿ ಪ್ರಮುಖ ಕೇಂದ್ರ ಸಚಿವರು ಹಾಗೂ ಸರ್ಕಾರ ರಚಿಸಿರುವ ಟಾಸ್ಕ್ ಫೋರ್ಸ್ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಮೇ 17ರ ಬಳಿಕ ಲಾಕ್‍ಡೌನ್ ವಿಸ್ತರಣೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ನಾಲ್ಕನೇ ಹಂತದಲ್ಲಿ ಎಷ್ಟು ದಿನಗಳ ಲಾಕ್‍ಡೌನ್ ಮಾಡಬೇಕು ಮತ್ತು ವಿನಾಯತಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಪ್ರಧಾನಿ ಮೋದಿ ಪಡೆಯಲಿದ್ದಾರೆ.
ಈಗಾಗಲೇ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಸಿಎಂಗಳ ಅಭಿಪ್ರಾಯದ ಜೊತೆಗೆ ತಜ್ಞರು ಮತ್ತು ಟಾಸ್ಕ್ ಫೋರ್ಸ್ ಗಳ ಸಲಹೆ ಆಧಾರಿಸಿ ಅಂತಿಮ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿತ್ತೆ ಎನ್ನಲಾಗಿದೆ.
ಬಹುತೇಕ ಇಂದಿನ ಸಭೆ ಬಳಿಕ ಎಲ್ಲ ನಿಯಮಗಳು ಅಂತಿಮವಾಗಿ ರೂಪಗೊಳ್ಳಲಿದೆ. ಮೇ 15 ರೊಳಗೆ ಕೇಂದ್ರ ಗೃಹ ಇಲಾಖೆ ಲಾಕ್‍ಡೌನ್ ಆದೇಶ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.