ಶಿವಮೊಗ್ಗ: ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ದೇಶಾದ್ಯಂತ ಲಾಕ್‍ಡೌಲ್ ಘೋಷಿಸಲಾಗಿದೆ. ಪರಿಣಾಮ ಅನೇಕರು ನೀರು, ಆಹಾರ ಸಿಗದೆ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ದೂರದ ನಗರಗಳಲ್ಲಿ ಸಿಲುಕಿ ತಮ್ಮ ಊರಿಗೆ ಹೋಗಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗೆ ಹೈದರಾಬಾದ್‍ನಲ್ಲಿ ಸಿಲುಕಿರುವ ಅಪ್ಪನನ್ನ ನೋಡುವ ಕೊನೆಯಾಸೆ ಇಟ್ಟಿದ್ದ ಬಾಲಕ ತಂದೆ ಬರುವುದಕ್ಕೂ ಮುನ್ನವೇ ಕೊನೆಯುಸಿರೆಳೆದ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರಂದ ಚರಣ್ (12) ಮೃತ ದುರ್ದೈವಿ. ಚರಣ್ ತಂದೆ ಲೋಕಪ್ಪ ಅವರು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅಂಡಕ್ಲಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಊರಿಗೆ ಮರಳುತ್ತಿದ್ದ ಅವರು ಹೈದರಾಬಾದ್‍ನಲ್ಲಿಯೇ ಲಾಕ್ ಆಗಿದ್ದಾರೆ.
ಇತ್ತ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ನರಳುತ್ತಿದ್ದ ಚರಣ್ ಕಳೆದೊಂದು ವಾರದಿಂದ ಅಪ್ಪನ ಬರುವಿಕೆಯ ನಿರೀಕ್ಷೆಯಲ್ಲಿದ್ದ. ಅಷ್ಟೇ ಅಲ್ಲದೆ ಚರಣ್ ಸೋಮವಾರ ವೈದ್ಯರ ಬಳಿ ತನ್ನ ಕೊನೆಯಾಸೆ ಅಪ್ಪನ್ನ ನೋಡುವುದಾಗಿ ಹೇಳಿಕೊಂಡಿದ್ದ. ಬಾಲಕ ತನ್ನ ಕೊನೆ ಕ್ಷಣದಲ್ಲೂ ಅಪ್ಪನನ್ನು ಕನವರಿಸುತ್ತಿದ್ದ. ಚರಣ್ ಸ್ಥಿತಿಯನ್ನು ಕಂಡು ಪೋಷಕರು ಕಣ್ಣೀರಾಗಿದ್ದರು.
ಆದರೆ ಇಂದು ವಿಧಿಯಾಟದಿಂದ ಚರಣ್ ಮೃತಪಟ್ಟಿದ್ದಾನೆ. ಚರಣ್ ತಂದೆ ಲೋಕಪ್ಪ ಅವರನ್ನು ಕರೆತರುವಂತೆ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.