ನಿರ್ಬಂಧ ಉಲ್ಲಂಘಿಸಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ- ಕೇಸ್ ದಾಖಲು

Public TV
2 Min Read
St Marys Island

ಉಡುಪಿ: ಇಡೀ ಜಗತ್ತೇ ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿದ್ದರೆ, ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ರಾತ್ರಿ ಪಾರ್ಟಿ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ.

St Marys Island 2

ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ, ನಿರ್ಮಿತಿ ಕೇಂದ್ರದ ಕೆಲ ಸಿಬ್ಬಂದಿಗಳ ಸಹಿತ ಏಳು ಮಂದಿ ಮಲ್ಪೆಯಿಂದ 8 ಕಿ.ಮೀ. ದೂರದಲ್ಲಿ ಸಮುದ್ರದ ಮಧ್ಯೆ ಇರುವ ಸೈಂಟ್ ಮೇರಿಸ್ ದ್ವೀಪದಲ್ಲಿ ಶನಿವಾರ ರಾತ್ರಿ ಗುಂಡು ಪಾರ್ಟಿ ನಡೆಸಿದ್ದಾರೆ ಎಂಬ ಆರೋಪವೂ ಇದೆ. ಶನಿವಾರ ರಾತ್ರಿ 9.30ಕ್ಕೆ ದ್ವೀಪದಲ್ಲಿ ವಿದ್ಯುತ್ ದೀಪಗಳ ಬೆಳಕು ಕಾಣುತ್ತಿತ್ತು. ಬೆಳಕು 11 ಗಂಟೆಯವರೆಗೂ ಒಂದೇ ಸ್ಥಳದಲ್ಲಿರುವುದನ್ನು ಗಮನಿಸಿದ ಸ್ಥಳೀಯರು, ಈ ಮಾಹಿತಿಯನ್ನು ಮಲ್ಪೆ ಪೊಲೀಸ್ ಠಾಣೆ ಹಾಗೂ ಕರಾವಳಿ ಕಾವಲು ಪೊಲೀಸರಿಗೆ ನೀಡಿದ್ದಾರೆ.

St Marys Island 1

ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ದ್ವೀಪದಲ್ಲಿ ಉರಿಯುತ್ತಿದ್ದ ದೀಪ ಆರಿಸಲಾಯಿತು. ಎರಡು ಕಾರುಗಳಲ್ಲಿ ಬಂದಿರುವವರು ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರು. ಕಾರುಗಳನ್ನು ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಕಾರು ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಅವರಿಗೆ ಸೇರಿದ್ದಾದರೆ, ಇನ್ನೊಂದು ನಿರ್ಮಿತಿ ಕೇಂದ್ರದ ಸಚಿನ್ ಅವರದ್ದಾಗಿತ್ತು. ಕರಾವಳಿ ಕಾವಲು ಪಡೆಯ ಪೊಲೀಸರು ಪರಿಶೀಲಿಸಿ, ಸುದೇಶ್ ಅವರಿಗೆ ದೂರವಾಣಿ ಕರೆ ಮಾಡಿದಾಗ, ತಾನು ಸೈಂಟ್ ಮೇರಿಸ್ ದ್ವೀಪದಲ್ಲಿ ಇರುವುದನ್ನು ಸುದೇಶ್ ಒಪ್ಪಿಕೊಂಡಿದ್ದರು. ತನ್ನೊಂದಿಗೆ ನಾಲ್ಕೈದು ಜನರಿದ್ದು, ದ್ವೀಪದಲ್ಲಿರುವ ಪರಿಕರಗಳನ್ನು ಸಾಗಿಸಲು ಬಂದಿದ್ದೆವು. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿದ್ದು ಕಡಿಮೆ ಆದಾಗ ವಾಪಸ್ ಬರುವುದಾಗಿ ತಿಳಿಸಿದ್ದರು. ದ್ವೀಪಕ್ಕೆ ತೆರಳಿದ ಪೊಲೀಸರು ಅಲ್ಲಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

St Marys Island 3

ಈ ಕುರಿತು ನಗರಸಭೆ ವಡಭಾಂಡೇಶ್ವರ ವಾರ್ಡ್ ಚುನಾಯಿತ ಸದಸ್ಯ ಯೋಗೀಶ್ ಸಾಲ್ಯಾನ್ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾನೂನು ಮೀರಿದವರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕರೇ ಆಗಿರುವುದರಿಂದ ಸಮಿತಿಯ ಕರಾರಿನಲ್ಲಿ ಏನು ಅವಕಾಶ ಅವರಿಗಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಜಿಲ್ಲಾಧಿಕಾರಿಗಳು ಏನು ಕ್ರಮ ಜರಗಿಸಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *