– ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ದಂಪತಿ
ಬೆಂಗಳೂರು: ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಇಂದು ತಮ್ಮ ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಪ್ರಶಾಂತ್ ನೀಲ್ ಅವರು ಪತ್ನಿ ಲಿಖಿತಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ (ಮೇ 5) ಒಂಬತ್ತು ವರ್ಷವಾಗಿದೆ. ಹೀಗಾಗಿ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವದ ಖುಷಿಯನ್ನು ಪ್ರಶಾಂತ್ ನೀಲ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರು ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪತ್ನಿ ಜೊತೆಗೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ತಮ್ಮ ಪತ್ನಿ ತೋರಿಸುತ್ತಿರುವ ಕಾಳಜಿಯನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಮೊದಲ ಭೇಟಿಯ ನೆನಪನ್ನು ಒಂದು ಸಾಲಿನಲ್ಲಿ ಹಂಚಿಕೊಳ್ಳುವ ಮೂಲಕ, ತಮ್ಮ ಮದುವೆ ಯಾವ ರೀತಿಯದ್ದು ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ.
“ನಮ್ಮ ಬದುಕು ಆರಂಭವಾಗಿ 9 ವರ್ಷಗಳಾಗಿವೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಾನಾ ಎಂದು ಪತ್ನಿಗೆ ಪ್ರಶಾಂತ್ ನೀಲ್ ಶುಭ ಹಾರೈಸಿದ್ದಾರೆ. ಪ್ರಶಾಂತ್ ನೀಲ್ ತಮ್ಮ ಪತ್ನಿಯನ್ನು ‘ನಾನಾ’ ಪ್ರೀತಿಯಿಂದ ಕರೆಯುತ್ತಾರೆ. ನಾವು ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಮಾಡಿದಂತೆಯೇ ಈಗಲೂ ನನ್ನ ಕೂದಲು ಸೆಟ್ ಮಾಡುವುದನ್ನು, ಕಾಳಜಿ ಮಾಡುವುದನ್ನು ಮಾಡುತ್ತೀಯ ” ಎಂದು ಪತ್ನಿಯ ಬಗ್ಗೆ ಮಾತನಾಡಿದ್ದಾರೆ.
https://www.instagram.com/p/B_ywBPogcu3/?utm_source=ig_web_copy_link
“ನಮ್ಮಿಬ್ಬರದು ಅರೇಂಜ್ಡ್ ಮ್ಯಾರೆಜೋ ಅಥವಾ ಪ್ರೇಮ ವಿವಾಹವೋ ಎಂಬ ನಮ್ಮ ವಾದವನ್ನು ಮುಂದುವರಿಸೋಣ. ಯಾಕೆಂದರೆ ನಮ್ಮ ಮದುವೆ ಬಗ್ಗೆ ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಹುಚ್ಚು ನೆನಪುಗಳು ಮತ್ತು ಜಗಳಗಳಿವೆ. ಹೀಗಾಗಿ ನಮ್ಮ ನೀಲ್‍ಗ್ಯಾಂಗ್ ಅನ್ನು ಕಟ್ಟುವ ಕೆಲಸವನ್ನು ಮುಂದುವರಿಸೋಣ” ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಪ್ರಶಾಂತ್ ನೀಲ್ ತಮ್ಮ ಮದುವೆ ಅರೇಂಜ್ಡ್ ಮ್ಯಾರೆಜೋ ಅಥವಾ ಲವ್ ಮ್ಯಾರೆಜೋ ಎಂಬ ಗೊಂದಲವನ್ನು ಅಭಿಮಾನಿಗಳಲ್ಲಿ ಮೂಡಿಸಿದ್ದಾರೆ. ಸದ್ಯಕ್ಕೆ ಪ್ರಶಾಂತ್ ನೀಲ್ ಲಾಕ್‍ಡೌನ್ ಅವಧಿಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.