ರಾಯಚೂರು: ಎಟಿಎಂನಿಂದ ಹಣ ಡ್ರಾ ಮಾಡಲು ಅಪರಿಚಿತ ವ್ಯಕ್ತಿಯಿಂದ ಸಹಾಯ ಪಡೆದು ವ್ಯಕ್ತಿಯೋರ್ವ ತನ್ನ ಖಾತೆಯಲ್ಲಿನ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.
ಜಿಲ್ಲೆಯ ಮಾನ್ವಿ ಪಟ್ಟಣದ ತ್ರಿಮೂರ್ತಿ ಗಂಗರಾಜು ಹಣ ಕಳೆದುಕೊಂಡಿರುವ ವ್ಯಕ್ತಿ. ತ್ರಿಮೂರ್ತಿ ಅವರು 2019ರ ನವೆಂಬರ್ 21ರಂದು ಪಟ್ಟಣದ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಆದರೆ ತಮಗೆ ಡ್ರಾ ಮಾಡಲು ಬರದ ಕಾರಣ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ಕೊಟ್ಟು 2,000 ರೂ. ಡ್ರಾ ಮಾಡಿ ಕೊಡಲು ಕೇಳಿಕೊಂಡಿದ್ದರು. ಆ ವ್ಯಕ್ತಿ ಅವರಿಗೆ ಹಣ ಡ್ರಾ ಮಾಡಿ ಕೊಟ್ಟು ಎಟಿಎಂ ಕಾರ್ಡ್ ಬದಲಿಸಿದ್ದ. ಆದರೆ ಇದನ್ನ ತಿಳಿಯದ ತ್ರಿಮೂರ್ತಿ ಹಾಗೆ ಮನೆಗೆ ಬಂದಿದ್ದರು.
ಬಳಿಕ 2020ರ ಮಾರ್ಚ್ 23ರಂದು ಪುನಃ ಹಣ ಡ್ರಾ ಮಾಡಲು ಎಟಿಎಂಗೆ ಹೋದಾಗ ತ್ರೀಮೂರ್ತಿ ಅವರಿಗೆ ಆಘಾತವಾಗಿದೆ. ಖಾತೆಯಲ್ಲಿ ಕೇವಲ 1,200 ರೂಪಾಯಿ ಇರುವುದು ಗೊತ್ತಾಗಿದೆ. ಖಾತೆಯಲ್ಲಿನ ಒಟ್ಟು 2,86,163 ರೂಪಾಯಿಗಳನ್ನು ಅವರ ಖಾತೆಯಿಂದ ಅಪರಿಚಿತ ವ್ಯಕ್ತಿ ಡ್ರಾ ಮಾಡಿಕೊಂಡಿದ್ದಾನೆ.
ಬ್ಯಾಂಕ್ ಮ್ಯಾನೆಜರ್ ಬಳಿ ತೆರಳಿದಾಗ ಎಟಿಎಂ ಕಾರ್ಡ್ ಬದಲಿಯಾಗಿರುವುದು ಬಯಲಾಗಿದೆ. ಅಪರಿಚಿತ ವ್ಯಕ್ತಿಯ ಕೈಗೆ ಎಟಿಎಂ ಕಾರ್ಡ್ ಕೊಟ್ಟು ತ್ರೀಮೂರ್ತಿ ಮೋಸ ಹೋಗಿದ್ದಾನೆ. ವ್ಯಕ್ತಿ ಮಾಹಿತಿ ಸಿಗದೆ ಕೊನೆಗೆ ಎಪ್ರಿಲ್ 30ರಂದು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.