ಐಸಿಸಿ ರ‍್ಯಾಂಕಿಂಗ್ ಬಿಡುಗಡೆ – ಪಂದ್ಯ ಆಡದೇ ಇದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ಇಳಿದ ಭಾರತ

Public TV
2 Min Read
team india test main

– 3 ಮಾದರಿಯಲ್ಲೂ ಭಾರತಕ್ಕಿಲ್ಲ ಅಗ್ರಸ್ಥಾನ
– ಇಂಡಿಯಾವನ್ನು ಹಿಂದಿಕ್ಕಿದ ಆಸೀಸ್, ಕಿವೀಸ್

ದುಬೈ: ಐಸಿಸಿ ಮೇ 1ರಂದು ತನ್ನ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೆಸ್ಟ್, ಏಕದಿನ ಮತ್ತು ಟಿ-20 ಈ ಮೂರು ಮಾದರಿಯಲ್ಲೂ ಭಾರತ ತಂಡ ಅಗ್ರಸ್ಥಾನ ಪಡೆಯಲು ವಿಫಲವಾಗಿದೆ.

ಐಸಿಸಿ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ, ಏಕದಿನದಲ್ಲಿ ಇಂಗ್ಲೆಂಡ್ ಮತ್ತು ಮೊದಲ ಬಾರಿಗೆ ಟಿ-20ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಭಾರತ ಟೆಸ್ಟ್ ನಲ್ಲಿ ಮೂರನೇ ಸ್ಥಾನ, ಏಕದಿನದಲ್ಲಿ ಎರಡನೇ ಸ್ಥಾನ ಮತ್ತು ಟಿ-20ಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

2016 ರಿಂದ 2017ರ ಸಮಯದಲ್ಲಿ ಆಡಿದ ಪಂದ್ಯಗಳನ್ನು ಪರಿಗಣಿಸದೆ ಈ ರ‍್ಯಾಂಕಿಂಗ್ ಅನ್ನು ಐಸಿಸಿ ಸಿದ್ಧಗೊಳಿಸಿದೆ. ಈಗ ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2019ರಲ್ಲಿ ನಡೆದ ಟೆಸ್ಟ್ ಪಂದ್ಯಗಳ ಶೇ. 100ರಷ್ಟು ಅಂಕಗಳು. ಜೊತೆಗೆ 2017 ಮತ್ತು 2018ರಲ್ಲಿ ನಡೆದ ಟೆಸ್ಟ್ ಪಂದ್ಯಗಳ ಶೇ 50ರಷ್ಟು ಅಂಕಗಳನ್ನು ತೆಗೆದುಕೊಂಡು ಈ ಪಟ್ಟಿಯನ್ನು ಸಿದ್ಧ ಮಾಡಿದೆ.

team india test main 2

ಈ ಮೊದಲು ಭಾರತ ಟೆಸ್ಟ್ ನಲ್ಲಿ 2016 ಅಕ್ಟೋಬರ್ ತಿಂಗಳಿನಿಂದ ಮೊದಲ ಸ್ಥಾನದಲ್ಲಿ ಇತ್ತು. ಏಕೆಂದರೆ 2016 ಮತ್ತು 2017ರ ಅವಧಿಯಲ್ಲಿ ಭಾರತ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಸೋತು ಬರೋಬ್ಬರಿ 12 ಟೆಸ್ಟ್ ಗಳನ್ನು ಗೆದ್ದಿತ್ತು. ಈ ಅವಧಿಯಲ್ಲಿ ನಡೆದ 5 ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧವೂ ಕೂಡ ಭಾರತ ಗೆದ್ದಿತ್ತು. ಆದರೆ ಈ ಪಂದ್ಯಗಳ ಅಂಕವನ್ನು ಐಸಿಸಿ ರ‍್ಯಾಂಕಿಂಗ್ ವೇಳೆ ಪರಿಗಣಿಸಿಲ್ಲ. ಆದ್ದರಿಂದ ಪಂದ್ಯಗಳನ್ನು ಆಡದೇ ಇದ್ದರೂ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ.

ಆದರೆ ಇಂದು ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೆ ಅಂಕಿ-ಅಂಶಗಳಲ್ಲಿ ಹೆಚ್ಚಿನ ಅಂತರವಿಲ್ಲ. ಆಸ್ಟ್ರೇಲಿಯಾ ತಂಡ 116 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದರೆ, ನ್ಯೂಜಿಲೆಂಡ್ ತಂಡ 115 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಇದೆ. ಹಾಗೇ ಭಾರತ ಕೂಡ 114 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಮೊಟ್ಟಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡ ಏಕದಿನ ರ‍್ಯಾಂಕಿಂಗ್ ನಲ್ಲಿ 127 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ತಂಡ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 50 ಓವರ್ ಗಳ ವಿಶ್ವಕಪ್ ಅನ್ನು ಎತ್ತಿಹಿಡಿದಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ಪ್ರಸ್ತುತ 119 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 116 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

2011ರಲ್ಲಿ ಐಸಿಸಿ ಟಿ-20 ರ‍್ಯಾಂಕಿಂಗ್ ಅನ್ನು ಪರಿಚಯಿಸಿದ ನಂತರ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ-20ಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಆದರೆ 2018ರಿಂದ ಟಿ-20ಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಟಿ-20ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನ ಇಂಗ್ಲೆಂಡ್ ಎರಡನೇ ಸ್ಥಾನ ಮತ್ತು ಭಾರತ ಮೂರನೇ ಸ್ಥಾನದಲ್ಲಿ ಇದೆ.

Share This Article
Leave a Comment

Leave a Reply

Your email address will not be published. Required fields are marked *