ಸದ್ಯದಲ್ಲಿ ಯಾವುದೇ ಕ್ರಿಕೆಟ್ ಟೂರ್ನಿ ಭಾರತದಲ್ಲಿ ಇರುವುದಿಲ್ಲ: ಗಂಗೂಲಿ

Public TV
1 Min Read
GANGULY

ಮುಂಬೈ: ಕೊರೊನಾ ವೈರಸ್ ಕಾರಣದಿಂದ ಭಾರತದಲ್ಲಿ ಸದ್ಯದ ಅವಧಿಯಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆ ಇರುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಜರ್ಮನಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಕಾರಣ ಅಲ್ಲಿ ಫುಟ್‍ಬಾಲ್ ಟೂರ್ನಿ ಏರ್ಪಡಿಸಲು ಮೇ ಮೊದಲ ವಾರದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಪರಿಣಾಮ ಭಾರತದಲ್ಲಿ ಕ್ರಿಕೆಟ್ ಟೂರ್ನಿಗಳು ಕೂಡ ಆರಂಭವಾಗುವ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಗಂಗೂಲಿ ಉತ್ತರಿಸಿದ್ದಾರೆ.

bcci

ಜಮರ್ನಿಗೆ ಹೋಲಿಸಿದರೆ ಭಾರತದಲ್ಲಿ ಇರುವ ಸಾಮಾಜಿಕ ಪರಿಸ್ಥಿತಿಗಳು ಭಿನ್ನವಾಗಿದೆ. ಆದ್ದರಿಂದ ಸದ್ಯದ ಸ್ಥಿತಿಯಲ್ಲಿ ಕ್ರಿಕೆಟ್ ಆರಂಭವಾಗುವ ಅವಕಾಶವಿಲ್ಲ. ಅಲ್ಲದೇ ಕ್ರಿಕೆಟ್ ಸಾಕಷ್ಟು ವಿಚಾರಗಳೊಂದಿಗೆ ಸಂಬಂಧ ಹೊಂದಿದೆ. ಕ್ರೀಡೆಗಾಗಿ ಎಲ್ಲರ ಜೀವವನ್ನು ಅಪಾಯದಲ್ಲಿಡಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಇತ್ತ ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಬೆಸ್‍ಬಾಲ್ ಪಂದ್ಯಗಳನ್ನು ಆರಂಭಿಸಲಾಗಿದೆ. ಆದರೆ ಮೊದಲಿನಂತೆ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಆಗಮಿಸಲು ಅವಕಾಶ ನೀಡಿಲ್ಲ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಭಾರತದಲ್ಲೂ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಐಪಿಎಲ್ ನಿರ್ವಹಿಸಲು ಅವಕಾಶ ಲಭಿಸಿದರೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆ ಇದೆ.

IPL Sourav Ganguly

ಇತ್ತ 2020ರ ಅಕ್ಟೋಬರ್ ನಲ್ಲಿ ಆರಂಭವಾಗ ಬೇಕಿರುವ ಟಿ20 ವಿಶ್ವಕಪ್ ಮೇಲೆ ಕೊರೊನಾ ವೈರಸ್ ಪ್ರಭಾವ ಬೀರಿದೆ. ಕೊರೊನಾ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರ ಸೆಪ್ಟೆಂಬರ್ 31ರ ವರೆಗೂ ವಿದೇಶಿಗರ ಆಗಮನಕ್ಕೆ ನಿಷೇಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಟೂರ್ನಿ ಮುಂದೂಡಲಾಗುತ್ತಾ ಅಥವಾ ನಿಗದಿತ ವೇಳಪಟ್ಟಿಯಂತೆ ಆರಂಭವಾಗಲಿದೆಯಾ ಎಂಬ ಚರ್ಚೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಸಿ ವಕ್ತಾರರು, ಟಿ20 ವಿಶ್ವಕಪ್ ಭವಿಷ್ಯದ ಬಗ್ಗೆ ನಾವು ಕ್ರಿಕೆಟ್ ತಜ್ಞರು ಹಾಗೂ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *