ಐಪಿಎಲ್ ಇತಿಹಾಸದಲ್ಲೇ ಹೆಚ್ಚು ಮೇಡನ್ ಓವರ್ ಮಾಡಿದ್ಯಾರು?

Public TV
2 Min Read
Praveen Kumar 1

ನವದೆಹಲಿ: ಐಸಿಸಿ 2007ರಲ್ಲಿ ಆರಂಭಿಸಿದ ಟಿ20 ವಿಶ್ವಕಪ್ ಟೂರ್ನಿಯನ್ನು ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು. ಇದಾದ ಬಳಿಕ ಅಂದ್ರೆ 2008ರಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಆರಂಭಿಸಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿತ್ತು.

ಐಪಿಎಲ್ ಟೂರ್ನಿಯು ವಿಶ್ವದ ಅತ್ಯುತ್ತಮ ಟಿ20 ಲೀಗ್ ಎಂದು ಪ್ರಶಂಸಿಸಲ್ಪಟ್ಟಿದೆ. ಏಕೆಂದರೆ ಇದು ಟೀಂ ಇಂಡಿಯಾದ ಸ್ಟಾರ್ ಆಟಗಾರರನ್ನು ವಿದೇಶಿ ಕ್ರಿಕೆಟಿಗರೊಂದಿಗೆ ಅಥವಾ ವಿರುದ್ಧವಾಗಿ ಆಡಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಯುವ ಭಾರತೀಯ ಪ್ರತಿಭೆಗಳಿಗೆ ತಮ್ಮ ಪ್ರದರ್ಶನವನ್ನು ನೀಡಲು ಒಂದು ಉತ್ತಮ ವೇದಿಕೆಯನ್ನು ನೀಡುತ್ತಿದೆ.

rcb mumbai indians

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವ ಕ್ರಿಕೆಟ್‍ಗೆ ಸಾಕಷ್ಟು ದೊಡ್ಡ ಬ್ಯಾಟ್ಸ್‌ಮನ್‌ಗಳನ್ನು ನೀಡಿದೆ ಎಂದು ಅನೇಕರು ನಂಬಿದ್ದಾರೆ. ಜೊತೆಗೆ ಬೌಲರ್‌ಗಳ ಕೌಶಲ್ಯವನ್ನೂ ಅಭಿಮಾನಿಗಳು ಗೌರವಿಸುತ್ತಾರೆ. ರನ್ ಏರಿಕೆ ನಿಯಂತ್ರಿಸಲು ಮತ್ತು ಸಿಕ್ಸರ್, ಬೌಂಡರಿಗಳನ್ನು ಮಿತಿಗೊಳಿಸಲು ಅನೇಕ ಬೌಲರ್‌ಗಳು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಯಾರು ಹೆಚ್ಚಿನ ಸಂಖ್ಯೆಯ ಮೇಡನ್ ಓವರ್‌ಗಳನ್ನು ಮಾಡಿದ್ದಾರೆ ಎನ್ನುವುದು ತಿಳಿಯುವುದು ಅಗತ್ಯವಾಗಿದೆ.

ವಿಶೇಷವೆಂದರೆ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೇಡನ್ ಓವರ್ ಮಾಡಿದ ಬೌಲರ್‌ಗಳ ಪಟ್ಟಿಯ ಟಾಪ್ ತ್ರಿಯಲ್ಲಿ ಭಾರತೀಯರೇ ಇದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟರ್, 84 ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಅನುಭವಿ ಪ್ರವೀಣ್ ಕುಮಾರ್ ಅವರು ಅಗ್ರಸ್ಥಾನದಲ್ಲಿದ್ದಾರೆ.  2 ಸ್ಥಾನದಲ್ಲಿ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಇದ್ದಾರೆ.

Praveen Kumar a

ಯಾರು ಎಷ್ಟು ಮೇಡನ್‍ ಓವರ್?:
ಪ್ರವೀಣ್ ಕುಮಾರ್- 14
ಇರ್ಫಾನ್ ಪಠಾಣ್- 10
ಧವಲ್ ಕುಲಕರ್ಣಿ- 8
ಲಸಿತ್ ಮಾಲಿಂಗ- 8
ಸಂದೀಪ್ ಶರ್ಮಾ- 8

Praveen Kumar

ಪ್ರವೀಣ್ ಕುಮಾರ್ ಅವರು ಐಪಿಎಲ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಸನ್‍ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್), ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ಮತ್ತು ಗುಜರಾತ್ ಲಯನ್ಸ್ (ಜಿಎಲ್) ಪರ ಆಡಿದ್ದಾರೆ. 33ರ ಹರೆಯದ ಪ್ರವೀಣ್ ಕುಮಾರ್ 2017ರ ಆವೃತ್ತಿಯಲ್ಲಿ ಸುರೇಶ್ ರೈನಾ ನೇತೃತ್ವದ ಜಿಎಲ್ ತಂಡದ ಪರ ಕೊನೆಯದಾಗಿ ಆಡಿದ್ದರು.

ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ವಿಕೆಟ್ ಪಡೆದ ಅಗ್ರ 20 ಬೌಲರ್‌ಗಳಲ್ಲಿ ಪ್ರವೀಣ್ ಕುಮಾರ್ ಕೂಡ ಒಬ್ಬರಾಗಿದ್ದಾರೆ. ಅವರು ಒಟ್ಟು 119 ಐಪಿಎಲ್ ಪಂದ್ಯಗಳನ್ನು ಆಡಿ 90 ವಿಕೆಟ್ ಉರುಳಿಸಿದ್ದಾರೆ.

Praveen Kumar C

2020ರ ಐಪಿಎಲ್ ಆವೃತ್ತಿಯು ಕೊರೊನಾ ವೈರಸ್‍ನಿಂದಾಗಿ ಮುಂದೂಡಲ್ಪಟ್ಟಿದೆ. ಹೀಗಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಲಾಕ್‍ಡೌನ್‍ನಿಂದಾಗಿ ಕ್ರಿಕೆಟ್ ಆಟಗಾರರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *