ನವದೆಹಲಿ: ಪ್ರಪಂಚದಾದ್ಯಂತ ಹಬ್ಬುತ್ತಿರುವ ಮಹಾಮಾರಿ ಕೊರೊನಾ ಭೀತಿ ಇದೀಗ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೂ ತಟ್ಟಿದೆ. ಭವನದ ಕಾಂಪ್ಲೆಕ್ಸ್ ನಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಕೊರೊನಾ ಬಂದಿದ್ದು, ಇದೀಗ ಸುತ್ತಮುತ್ತಲಿರುವ 125 ಕುಟುಂಬವನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಪಾಸಿಟಿವ್ ಬಂದಿರುವ ಮಹಿಳೆ ರಾಷ್ಟ್ರಪತಿ ಭವನದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿರುವ ವ್ಯಕ್ತಿಯ ಸಂಬಂಧಿಯಾಗಿದ್ದಾರೆ. ಇತ್ತೀಚೆಗೆ ಮಹಿಳೆಯ ಸೊಸೆ ತಾಯಿ ಕೋವಿಡ್ 19ಗೆ ಬಲಿಯಾಗಿದ್ದರು. ಹೀಗಾಗಿ ಕುಟುಂಬದವರೆಲ್ಲ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಸದ್ಯ ಮಹಿಳೆಯ ಕುಟುಂಬದವರಿಗೆ ಕೊರೊನಾ ನೆಗೆಟಿವ್ ಎಂಬುದಾಗಿ ವರದಿ ಬಂದಿದ್ದು, ಎಲ್ಲರನ್ನೂ ಐಸೋಲೇಷನ್ ನಲ್ಲಿಡಲಾಗಿದೆ.
ಸೊಸೆಗೂ ಕೊರೊನಾ ಪಾಸಿಟಿವ್ ಎಂಬುದಾಗಿ ಸೋಮವಾರ ವರದಿ ಬಂದಿದೆ. ಈಕೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆಲ್ಲ ನೆಗೆಟಿವ್ ಎಂಬುದಾಗಿ ವರದಿ ಬಂದಿದೆ. ಸದ್ಯ ರಾಷ್ಟ್ರಪತಿ ಭವನದ ಸುತ್ತಮುತ್ತ ಇರೋ 125 ಮನೆಗಳ ಸದಸ್ಯರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದ್ದು, ಒಂದೇ ಬ್ಲಾಕ್ ನಲ್ಲಿರುವ 25 ಮನೆಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಲಾಗಿದೆ.
ಭಾರತದಲ್ಲಿ ಕೊರೊನಾ ಸೋಂಕಿತ ಸಂಖ್ಯೆ 18 ಸಾವುರಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 47 ಮಂದಿ ಸಾವನ್ನಪಿದ್ದಾರೆ. ಹೀಗಾಗಿ ಕೊರೊನಾಗೆ ಒಟ್ಟು 590 ಮಂದಿ ಬಲಿಯಾಗಿದ್ದು, 3,252 ಮಂದಿ ಗುಣಮುಖರಾಗಿದ್ದಾರೆ.