ಚಾಮರಾಜನಗರ: ಆಸ್ಪತ್ರೆಗೆ ದಾಖಲಿಸಿದ ಗರ್ಭಿಣಿ ಮಗಳನ್ನು ಕಾಣಲು ಲಾಕ್‍ಡೌನ್ ಮಧ್ಯೆ ಪೊಲೀಸ್ ಕಣ್ತಪ್ಪಿಸಿ ಹೋದ ತಂದೆ ಸಾವನ್ನಪ್ಪಿರುವ ಘಟನೆ ತಮಿಳುನಾಡು ಗಡಿಯಲ್ಲಿ ನಡೆದಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಪಳ್ಳಿಪಾಲ್ಯದಲ್ಲಿ ವಾಸವಿದ್ದ ಪೆರುಮಾಳ್(60) ಮೃತ ದುರ್ದೈವಿ. ಪೆರುಮಾಳ್ ತಮ್ಮ ಮಗಳು ಸುಮತಿಯನ್ನು ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಪುದೂರು ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದರು. ಮಗಳು 9 ತಿಂಗಳ ಗರ್ಭಿಣಿಯಾಗಿದ್ದು, ಹೆರಿಗೆ ದಿನ ಹತ್ತಿರ ಬಂತೆಂದು ಶನಿವಾರ ಮೆಟ್ಟೂರು ಆಸ್ಪತ್ರೆಗೆ ದಾಖಲಾಗಿದ್ದರು.
ಹೀಗಾಗಿ ಮಗಳನ್ನು ಕಾಣಬೇಕೆಂಬ ಹಂಬಲದಿಂದ ಚೆಕ್‍ಪೋಸ್ಟ್ ನಲ್ಲಿ ಪೊಲೀಸರ ಕಣ್ತಪ್ಪಿಸಿ ತಂದೆ ಹೊರಟರು. ಮೆಟ್ಟೂರು ತಲುಪಲು ಪಾಲಾರ್ ಹಳ್ಳಕ್ಕೆ ಇಳಿದ ವೇಳೆ ಮಾರ್ಗ ಮಧ್ಯೆ ಈಜಲಾಗದೇ ತಂದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆ ತಮಿಳುನಾಡಿನ ಬರಗೂರು ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಸಿಕ್ಕಿದ್ದು, ಪ್ರಕರಣ ದಾಖಲಾಗಿದೆ.