ಭಾರತೀಯ ನೌಕಾಪಡೆಗೂ ತಟ್ಟಿದ ಕೊರೊನಾ ಭೀತಿ – 21 ಸಿಬ್ಬಂದಿಗೆ ಸೋಂಕು

Public TV
1 Min Read
mumbai navy

ಮುಂಬೈ: ಭಾರತೀಯ ನೌಕಾಪಡೆಗೂ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಮುಂಬೈನಲ್ಲಿ ಇರುವ ನೌಕಾನೆಲೆಯ 21 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ನೌಕಾಪಡೆಯ 20 ಸೇಲರ್ ಗಳು ಸೇರಿ ಒಟ್ಟು 21 ಮಂದಿ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಐಎನ್‍ಎಸ್ ಅಶ್ವಿನಿ ನೌಕಾಪಡೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಮಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕಿತ ಸೇಲರ್ ಗಳು ಮುಂಬೈನ ಐಎನ್‍ಎಸ್ ಆಂಗ್ರೆಯಲ್ಲಿ ನೀಡಲಾಗಿದ್ದ ವಸತಿ ನಿಲಯಗಳಲ್ಲಿ ಇದ್ದರು. ಆಂಗ್ರೆ ನೌಕಾನೆಲೆ ಸರಕು ಸಾಗಣೆ ಮತ್ತು ಆಡಳಿತ ವ್ಯವಹಾರಗಳಲ್ಲಿನ ನೌಕಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನೌಕಾಪಡೆ ಕಮಾಂಡ್‍ಗೆ ಸಹಕಾರಿಯಾಗಿದೆ.

ಅಗತ್ಯ ಕರ್ತವ್ಯಗಳಿಗಾಗಿ ನೌಕಾಪಡೆ ವಲಯಗಳಲ್ಲಿ ಸಿಬ್ಬಂದಿ ಸಂಚರಿಸಿದ್ದರು. ಈ ಹಿನ್ನೆಲೆ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ಊಹಿಸಲಾಗಿದೆ. ಏಪ್ರಿಲ್ 7ರಂದು ನೌಕಾಪಡೆಯ ಸೇಲರ್ ಒಬ್ಬರಲ್ಲಿ ಸೊಂಕು ಕಾಣಿಸಿಕೊಂಡಿತ್ತು. ಸದ್ಯ 21 ಮಂದಿಗೆ ಕೊರೊನಾ ತಗುಲಿದೆ. ಆಂಗ್ರೆ ನೌಕಾನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಇಲ್ಲಿರುವ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಐಎನ್‍ಆಸ್ ಆಂಗ್ರೆ ನೌಕಾನೆಲೆಯಿಂದ ಕೆಲವು 100 ಮೀಟರ್ ಗಳ ಅಂತರದಲ್ಲಿ ಯುದ್ಧ ನೌಕೆಗಳು ಹಾಗೂ ಸಬ್‍ಮೆರಿನ್‍ಗಳು ಕಾರ್ಯನಿರ್ವಸುತ್ತಿವೆ. ಆದರೆ ಅದರಲ್ಲಿನ ಯಾವುದೇ ಸಿಬ್ಬಂದಿಗೆ ಸೋಂಕು ತಗುಲಿಲ್ಲ. ಹೀಗಾಗಿ ನೌಕಾಪಡೆ ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ದೇಶದ ಸಾಥ್ ನೀಡಲಿದೆ ಎಂದು ನೌಕಾಪಡೆ ತಿಳಿಸಿದೆ.

ಭಾರತದಲ್ಲಿ ಸದ್ಯ 14,425 ಮಂದಿಗೆ ಸೋಂಕು ತಗುಲಿದ್ದು, 488 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2,045 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹರಡಿರುವ ರಾಜ್ಯದಲ್ಲಿ ಮಾಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 3,320 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 201 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *