ತಬ್ಲಿಘಿಗೆ ಹೋಗಿದ್ದ ಸ್ನೇಹಿತನಿಂದ ಸೋಂಕು, ವೃದ್ಧ ಬಲಿ – ಕಲಬುರಗಿಯ ನಿದ್ದೆಗೆಡಿಸಿದೆ ಮೂರು ಸಾವು

Public TV
2 Min Read
851527 corona testing kit

ಕಲಬುರಗಿ: ತೊಗರಿ ಕಣಜ ಕಲಬುರಗಿ ಜಿಲ್ಲೆಯಲ್ಲಿಗ ಕೊರೊನಾ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು ಮೂರು ಜನ ಸೋಂಕಿನಿಂದ ಸಾವನಪ್ಪಿದ್ದಾರೆ. ಇದು ಇದೀಗ ಅಲ್ಲಿನ ಜಿಲ್ಲಾಡಳಿತ ಹಾಗೂ ಜನರ ನಿದ್ದೆಗೆಡಿಸಿದೆ.

ದೇಶದಲ್ಲಿಯೇ ಮೊದಲ ಸಾವು ಸಂಭವಿಸಿದ ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಸೋಮವಾರ ಸಾಯಂಕಾಲ ಕಲಬುರಗಿ ನಗರದ ಮೊಮ್ಮಿನಪುರ ಬಡಾವಣೆಯ 55 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಆದರೆ ಸ್ನೇಹಿತ ತಬ್ಲಿಘಿಗೆ ಹೋಗಿ ಬಂದ ಹಿನ್ನೆಲೆಯಲ್ಲಿ ವೃದ್ಧನಿಗೂ ಸೋಂಕು ಹರಡಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಎಸ್‍ಐ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

Corona Virus 2

ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಮೂರು ಜನ ಸಾವನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ವು ಸಾವನ್ನಪ್ಪಿದ ಕುಖ್ಯಾತಿಗೇ ಕಲಬುರಗಿ ಜಿಲ್ಲೆ ಸೇರಿಕೊಂಡಿದೆ.

ತಬ್ಲಿಘಿ ಮೂಲಕ ಮೃತನ ಮನೆಯವರಿಗೂ ಸಹ ಸೋಂಕಿನ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮೃತನ ಕುಟುಂಬದ 18 ಜನರನ್ನು ಸಹ ಇದೀಗ ಕಲಬುರಗಿಯ ಇಎಸ್‍ಐ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಮೂರು ಜನರಿಗೆ ಜ್ವರದ ಲಕ್ಷಣಗಳು ಪ್ರಾಥಮಿಕ ಹಂತದಲ್ಲಿ ಕಂಡು ಬಂದಿದ್ದು, ಅವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಈ ಮೂಲಕ ಕಲಬುರಗಿ ಜಿಲ್ಲೆ ಇದೀಗ ಕೆಂಪು ವಲಯಕ್ಕೆ ಹೋಗಿದೆ.

Corona Ward a

ಕಲಬುರಗಿಯಲ್ಲಿ ಮೃತಪಟ್ಟ ಮೂರು ಜನ ಸಹ ಕಲಬುರಗಿ ಉತ್ತರ ಮತ ಕ್ಷೇತ್ರದವರಾಗಿದ್ದಾರೆ. ಬಹುತೇಕ ಕೊರೊನಾ ಪಾಸಿಟಿವ್ ಪ್ರಕರಣ ಸಹ ಅದೇ ಕ್ಷೇತ್ರದಲ್ಲಿಯೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಕ್ಷೇತ್ರವನ್ನು ಸೀಲ್ ಡೌನ್ ಮಾಡಿದರೆ ಮಾತ್ರ ಕಲಬುರಗಿಯಲ್ಲಿ ಕೊರೋನಾ ಸೋಂಕಿಗೆ ಒಂದಿಷ್ಟು ಬ್ರೇಕ್ ಹಾಕಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಒಟ್ಟು 13 ಮಂದಿಗೆ ಕೊರೊನಾ ಬಂದಿದ್ದು, 2 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿಂದೆ ಮೃತಪಟ್ಟವರು:
ಮಾರ್ಚ್ 11 ರಂದು ಚಿಕಿತ್ಸೆ ಫಲಕಾರಿಯಾಗದೇ ಸೌದಿಯಿಂದ ಬಂದಿದ್ದ 76 ವರ್ಷದ ವೃದ್ಧ ಹೈದರಾಬಾದ್ ನಲ್ಲಿ ಸಾವನ್ನಪ್ಪಿದ್ದರು. ಇದಾದ ಬಳಿಕ ಏ.9 ರಂದು ಕಲಬುರಗಿ ಹಣ್ಣಿನ ವ್ಯಾಪಾರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಯಾವುದೇ ಸಂಪರ್ಕ ಇಲ್ಲದ ಈ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಕುಟುಂಬದವರ ವಿಚಾರಣೆಯ ಸಂದರ್ಭದಲ್ಲಿ ಪುಣೆಯಲ್ಲಿದ್ದ ಸಹೋದರಿಯ ಮನೆಗೆ ತೆರಳಿದ್ದರು ಎಂದು ತಿಳಿಸಿದ್ದರು. ಆದರೆ ವ್ಯಕ್ತಿಯ ಫೋನ್ ನಂಬರ್ ಟ್ರ್ಯಾಕ್‍ಗೆ ಮಾಡಿದಾಗ ಪುಣೆಗೆ ತೆರಳದ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರನ್ನು ಜಿಲ್ಲಾಡಳಿತ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ತಬ್ಲಿಘಿಗೆ ಹೋಗಿದ್ದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

coronavirus 1 1000x600 1

ಕಲಬುರಗಿ ಜಿಲ್ಲೆಯಿಂದ 26 ಜನ ತಬ್ಲಿಘಿಗೆ ಹೋಗಿದ್ದು, ಎಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ ಮೂಲಗಳ ಪ್ರಕಾರ ಜಿಲ್ಲೆಯಿಂದ 50ಕ್ಕೂ ಹೆಚ್ಚು ಜನ ತಬ್ಲಿಘಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಈಗಲೂ ತಬ್ಲಿಘಿಗೆ ತೆರಳಿದ ವ್ಯಕ್ತಿಗಳು ಆಸ್ಪತ್ರೆಗೆ ಬಂದು ಪರೀಕ್ಷೆಗೆ ಹಾಜರಾಗಬೇಕೆಂದು ಕೇಳಿಕೊಳ್ಳುತ್ತಿದೆ.

ಕರ್ನಾಟಕದಿಂದ 1,300 ಮಂದಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು, 50ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 269 ಮಂದಿ, ಇತರ ಜಿಲ್ಲೆಗಳಲ್ಲಿ 472 ಮಂದಿ ಸೇರಿ ಒಟ್ಟು 801 ಮಂದಿ ಕ್ವಾರಂಟೈನ್‍ನಲ್ಲಿದ್ದು 581 ಮಂದಿ ಇನ್ನೂ ಪತ್ತೆಯಾಗಿಲ್ಲ. 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *