ಬೆಂಗಳೂರು: ಕರ್ನಾಟದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತೆ ಎರಡು ವಾರ ಲಾಕ್‍ಡೌನ್ ಮುಂದುರಿಸುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ ಲಾಕ್‍ಡೌನ್ ಶಾಲೆಗಳಿಗೆ ಪರಿಣಾಮ ಬೀರಿದ್ದು, ಇದರಿಂದ ಈ ವರ್ಷದ ಶೈಕ್ಷಣಿಕ ವರ್ಷದ ಆರಂಭ ತಡವಾಗುವ ಸಾಧ್ಯತೆ ಇದೆ.
ಜುಲೈ ಅಥವಾ ಆಗಸ್ಟ್‌ನಿಂದ ಶಾಲೆಗಳು ಓಪನ್ ಆಗುವ ಸಾಧ್ಯತೆ ಇದೆ. ಇದರಿಂದ ಶಾಲೆಗಳು ಬರೋಬ್ಬರಿ ನಾಲ್ಕು ತಿಂಗಳು ಬಂದ್ ಆಗಲಿದೆ. ಇನ್ನೂ ದ್ವಿತೀಯ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆಗಬೇಕು. ಮೌಲ್ಯಮಾಪನ ಪ್ರಕ್ರಿಯೆ ಮುಗಿದು ಫಲಿತಾಂಶ ಕೊಡಬೇಕು. ಪಠ್ಯಪುಸ್ತಕ, ಸಮವಸ್ತ್ರ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆಲ್ಲಾ ಹೆಚ್ಚು ಸಮಯವಾಗಬೇಕಾಗಿದೆ. ಹೀಗಾಗಿ ಜೂನ್‍ನಲ್ಲಿ ಶಾಲೆಗಳು ಪ್ರಾರಂಭ ಮಾಡುವುದು ಕಷ್ಟ ಎನ್ನುವ ಮಾತು ಕೇಳಿ ಬಂದಿದೆ.
ತಜ್ಞರು ಆಗಸ್ಟ್‌ವರೆಗೂ ಶಾಲೆಗಳನ್ನು ತೆರೆಯದಂತೆ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ. ಹೀಗಾಗಿ ಜುಲೈ ಅಥವಾ ಆಗಸ್ಟ್‌ನಲ್ಲಿ ಶಾಲೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಚಿಂತನೆ ಮಾಡಿಲ್ಲ. ಕೊರೊನಾ ಸ್ಥಿತಿ ತಿಳಿ ಆದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
1 ರಿಂದ 9ನೇ ತರಗತಿಯವರೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಯಾಕೆಂದರೆ ಈಗಾಗಲೇ ಅವರೆಲ್ಲರನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ. ಈ ಬಗ್ಗೆ ಖಾಸಗಿ ಶಾಲೆ ಒಕ್ಕೂಟದ ಕಾರ್ಯದರ್ಶಿಯಾಗಿರುವ ಶಶಿಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಪರಿಸ್ಥಿತಿಯಲ್ಲಿ ದೇಶಾದ್ಯಂತ ನಡೆಯುವ ಬೆಳವಣಿಗೆಯನ್ನು ನೋಡಿಕೊಂಡು ನಾವು ನಿರ್ಧಾರ ಮಾಡಬೇಕಾಗುತ್ತದೆ. ಆಗಸ್ಟ್‌ನಲ್ಲಿ ಶಾಲೆ ತೆರೆಯುವುದು ತುಂಬಾ ವಿಳಂಬ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿ ಮಾಡಬೇಕು, ಪರೀಕ್ಷೆ ಮುಗಿದು, ಮೌಲ್ಯಮಾಪನ ಮಾಡಬೇಕು. ಆ ಮೇಲೆ ಫಲಿತಾಂಶ ಕೊಡಬೇಕು. ನಂತರ ಪಿಯುಸಿಗೆ ಹೋಗಬೇಕು. ಇದೆಲ್ಲವನ್ನು ನೋಡಿದರೆ ಜೂನ್‍ಗೆ ಶಾಲೆ ಶುರು ಮಾಡುವ ತೀರ್ಮಾನ ಮಾಡಿದರೂ ಜುಲೈ ಅಂತ್ಯಕ್ಕೆ ತರಗತಿ ಶುರುವಾಗಬಹುದು. ಕೊರೊನಾ ಏಪ್ರಿಲ್‍ಗೆ ಅಂತ್ಯವಾದರೆ, ಏಕಾಏಕಿ ಶಾಲೆ ತೆರೆಯಲು ಸಾಧ್ಯವಿಲ್ಲ. ಇತ್ತ ಪಠ್ಯಪುಸ್ತಕ ಸಿದ್ಧತೆ ಮಾಡಬೇಕು. ಜೊತೆಗೆ ಪೋಷಕರು ತಕ್ಷಣ ಮಕ್ಕಳನ್ನು ಶಾಲೆಗೆ ಕಳಿಹಿಸುವುದಿಲ್ಲ. ಇದೆಲ್ಲವನ್ನು ಶಿಕ್ಷಣ ಇಲಾಖೆಯವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.