– ಐದು ದಿನಗಳ ಕಾಲ ಎಣ್ಣೆ ಮಾರಾಟಕ್ಕೆ ಅವಕಾಶ
ದಿಸ್ಪುರ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಮದ್ಯ ಪ್ರಿಯರು ಅಂಗಡಿ ಓವನ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು. ಇದೀಗ ಲಾಕ್‍ಡೌನ್ ನಡುವೆಯೇ ಅಸ್ಸಾಂ ಮತ್ತು ಮೇಘಾಲಯದ ಮದ್ಯದಂಗಡಿಗಳು ಇಂದಿನಿಂದ ಮತ್ತೆ ತೆರೆಯಲು ನಿರ್ಧರಿಸಿವೆ ಎಂದು ಉಭಯ ರಾಜ್ಯಗಳ ಅಬಕಾರಿ ಇಲಾಖೆಗಳು ತಿಳಿಸಿವೆ.
ಅಸ್ಸಾಂನಲ್ಲಿ, ಮದ್ಯದಂಗಡಿಗಳು, ಸಗಟು ಗೋದಾಮುಗಳು ಮತ್ತು ಸಾರಾಯಿ ಮಳಿಗೆಗಳು ಸೇರಿದಂತೆ ಲಿಕ್ಕರ್ ಶಾಪ್ ಇಂದಿನಿಂದ ಪ್ರತಿದಿನ 7 ಗಂಟೆಗಳ ಕಾಲ ತೆರೆಯಲ್ಪಡುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಇಂದಿನಿಂದ ಏಪ್ರಿಲ್ 17 ವರೆಗೆ ಅಂದರೆ ಶುಕ್ರವಾರದವರೆಗೆ ಮದ್ಯದಂಗಡಿ ತೆರೆದಿರುತ್ತವೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಶಾಪ್ ಓಪನ್ ಆಗಿರುತ್ತವೆ. ಇದನ್ನೂ ಓದಿ: ಏಪ್ರಿಲ್ 14ರ ಬಳಿಕ ಸಿಗುತ್ತಾ ಮದ್ಯ? – 2 ದಿನದಲ್ಲಿ ಸ್ಪಷ್ಟ ನಿರ್ಧಾರ
ಮೇಘಾಲಯದಲ್ಲಿ ಮದ್ಯದಂಗಡಿಗಳು ಮತ್ತು ಗೋದಾಮುಗಳು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ತೆರೆದಿರುತ್ತವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಕೈ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಘಾಲಯದಲ್ಲೂ ಏಪ್ರಿಲ್ 17ವರೆಗೆ ಮಾತ್ರ ಮದ್ಯದಂಗಡಿ ತೆರೆದಿರುತ್ತವೆ.
ಅನುಮತಿ ನೀಡಲಾಗಿರುವ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮದ್ಯದಂಗಡಿಗಳು ತೆರೆದಿರುತ್ತವೆ. ಅಂಗಡಿಯಲ್ಲಿ ಕನಿಷ್ಟ ಸಿಬ್ಬಂದಿ ಕೆಲಸ ಮಾಡಬಹುದು. ಅಲ್ಲದೇ ಬಾಟಲ್ ಕೊಡುವಾಗ ಮತ್ತು ಹಣ ಪಡೆಯುವಾಗ ಗ್ರಾಹಕರು ಮತ್ತು ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಅಲ್ಲದೇ ಶಾಪ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಅವರಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ಮಾಲೀಕರೇ ಮಾಡಬೇಕು ಎಂದು ಅಸ್ಸಾಂ ಅಬಕಾರಿ ಇಲಾಖೆ ತಿಳಿಸಿದೆ.
ಮೇಘಾಲಯ ಅಬಕಾರಿ ಆಯುಕ್ತ ಪ್ರವೀಣ್ ಬಕ್ಷಿ ಅವರು, ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ. ಜೊತೆಗೆ ಪ್ರತಿ ಮನೆಗೆ ಒಬ್ಬ ವ್ಯಕ್ತಿ ಮಾತ್ರ ಅಂಗಡಿಗೆ ಬಂದು ಮದ್ಯ ಖರೀದಿ ಮಾಡಬೇಕು. ಅಲ್ಲದೇ ಒಂದು ಪ್ರದೇಶ ಅಥವಾ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಗ್ರಾಹಕರು ಮತ್ತು ಶಾಪ್‍ನಲ್ಲಿ ಕೆಲಸ ಮಾಡುವವರಿಗೆ ಸ್ಯಾನಿಟೈಸರ್ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೋವಿಡ್ 19 ವೈರಸ್‍ನಿಂದ ಸರ್ಕಾರ ಮದ್ಯದಂಗಡಿಗಳನ್ನು ಮುಚ್ಚಿತ್ತು. ಆದರೆ ಜನರು ಮತ್ತೆ ಮದ್ಯದಂಗಡಿ ತೆರೆಯುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದರು. ಬಿಜೆಪಿ ಸೇರಿದಂತೆ ಮೇಘಾಲಯ ಮೈತ್ರಿ ಪಾಲುದಾರರು ಮದ್ಯದಂಗಡಿಗಳನ್ನು ಮುಚ್ಚುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಮೇಘಾಲಯದಲ್ಲಿ ವರದಿಯಾಗಿಲ್ಲ.