ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

Public TV
2 Min Read

– ಕೊರೊನಾ ಸಮುದಾಯ ಪ್ರಸಾರ ಹಂತಕ್ಕೆ ಕಾಲಿಟ್ಟಿಲ್ಲ
– 24 ಗಂಟೆಗಳಲ್ಲಿ 678 ಮಂದಿಗೆ ಸೋಂಕು, 33 ಜನ ಸಾವು

ನವದೆಹಲಿ: ನಮಗೆ 1 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಈಗ 3.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾವು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದೇವೆ. ಕೇವಲ ಶೇ.0.2 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿವೆ. ಸಂಗ್ರಹಿಸಿದ ಮಾದರಿಗಳ ಆಧಾರದ ಮೇಲೆ ಹೇಳುವುದಾದರೆ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಎನ್ನುವುದು ತಿಳಿಯುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 678 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 33 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,412ಕ್ಕೆ ಏರಿದರೆ, ಮೃತರ ಸಂಖ್ಯೆ 199 ಆಗಿದೆ. ಈವರೆಗೂ 503 ಜನರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅವರೊಂದಿಗೆ ಯಾವುದೇ ರೀತಿಯ ಅಸಭ್ಯ ವರ್ತನೆ ತೋರುವುದು ಸರಿಯಲ್ಲ. ಇಂತಹ ಘಟನೆಗಳು ಅವರ ಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಮೂರನೇ ಹಂತ (ಸಮುದಾಯ ಪ್ರಸಾರ)ಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ ಮತ್ತು ಎಚ್ಚರಕೆಯಿಂದ. ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಗಳುತ್ತಿದೆ ಎಂದು ಹೇಳಿದರು.

ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ದಮ್ಮು ರವಿ ಮಾತನಾಡಿ, ನಾವು ಗುರುವಾರ 20,473 ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿದ್ದೇವೆ. ನಾವು ಅತ್ಯುತ್ತಮ ಸಹಕಾರವನ್ನು ಪಡೆಯುತ್ತಿದ್ದೇವೆ. ಇದೆಲ್ಲ ಕೇಂದ್ರ ಸರ್ಕಾರದ ಪ್ರಯತ್ನ ಎಂದು ತಿಳಿಸಿದರು.

ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಸಾಕಷ್ಟು ವಿನಂತಿಗಳು ಈಗಾಗಲೇ ಬಂದಿವೆ. ಹಲವಾರು ದೇಶಗಳು ಈ ಔಷಧಿಗೆ ವಿನಂತಿಗಳನ್ನು ಮಾಡಿಕೊಂಡಿವೆ. ಆದರೆ ದೇಶೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ಸಂಗ್ರಹಿಸಿದ್ದೇವೆ. ಕೆಲವು ಹೆಚ್ಚುವರಿ ಔಷಧಿಗಳನ್ನು ರಫ್ತು ಉದ್ದೇಶಗಳಿಗಾಗಿ ಬಿಡುಗಡೆ ಮಾಡಲು ಮಂತ್ರಿ ಮಂಡಳಿ ತೀರ್ಮಾನಿಸಿದೆ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ಕೋವಿಡ್-19 ವಿರುದ್ಧ ಹೋರಾಡಲು ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಉತ್ಸವಗಳನ್ನು ಕೈಬಿಡಬೇಕು. ಜೊತೆಗೆ ಲಾಕ್‍ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಎಂಎಚ್‍ಎ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಿದರು.

ಗಡಿ ಭದ್ರತಾ ಅಧಿಕಾರಿಗಳೊಂದಿಗೆ ಇಂಡೋ-ಪಾಕ್ ಮತ್ತು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಕುರಿತು ಗೃಹ ಸಚಿವರು ಪರಿಶೀಲನಾ ಸಭೆ ನಡೆಸಿದ್ದಾರೆ. ಫೆನ್ಸಿಂಗ್ ಇಲ್ಲದ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಬಿಗಿಗೊಳಿಸಲು ಮತ್ತು ಗಡಿಯಾಚೆ ಯಾರು ಸುಳಿದಾಟದಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ ಎಂದು ಪುಣ್ಯ ಸಲೀಲಾ ಶ್ರೀವಾಸ್ತವ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *