ಬಾಳೆ ಎಲೆಯಲ್ಲಿ ಊಟ ಮಾಡಿ, ಸಮತೋಲನ ಕಾಪಾಡಿ: ಆನಂದ್ ಮಹೀಂದ್ರಾ

Public TV
2 Min Read
anand mahindra

– ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಿ

ನವದೆಹಲಿ: ಹೊಸ ಐಡಿಯಾಗಳು, ಸಾಮಾಜಿಕ ಸಮಸ್ಯೆಗಳು, ಸಹಾಯ ಮಾಡುವುದು ಹೀಗೆ ಹಲವು ವಿಚಾರಗಳ ಕುರಿತು ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಿವೃತ್ತ ಪತ್ರಕರ್ತರು ನೀಡಿದ ಐಡಿಯಾ ಕುರಿತು ಟ್ವೀಟ್ ಮಾಡಿದ್ದಾರೆ.

ಒಂದೆಡೆ ಲಾಕ್‍ಡೌನ್‍ನಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರಕುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಅತ್ತ ಲಾಕ್‍ಡೌನ್‍ನಿಂದಾಗಿ ಬಹುತೇಕ ಫ್ಯಾಕ್ಟರಿ ಕೆಲಸಗಳು ಸ್ಥಗಿತವಾಗಿದ್ದು, ಕಾರ್ಮಿಕರು ಸಹ ಕೆಲಸಕ್ಕೆ ತೆರಳುತ್ತಿಲ್ಲ. ಇಂತಹ ಸಮಯದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಆನಂದ್ ಮಹೀಂದ್ರಾ ಅವರು ರೈತರಿಗೂ ಆದಾಯ ಲಭ್ಯವಾಗುವಂತೆ, ಪ್ಲೇಟ್‍ಗಳ ಕೊರತೆಯೂ ಕಾಡದಂತೆ ಉತ್ತಮ ಐಡಿಯಾ ಹಂಚಿಕೊಂಡಿದ್ದಾರೆ. ಬಾಳೆ ಎಲೆ ಕುರಿತು ಗಮನ ಸೆಳೆದಿದ್ದಾರೆ.

Indian Natural Fresh Banana Leaves

ಈ ಕುರಿತು ಫೋಟೋಗಳ ಸಮೇತ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ನಿವೃತ್ತ ಪತ್ರಕರ್ತ ಪದ್ಮ ರಾಮನಾಥ್ ಅವರು ನನಗೆ ಒಂದು ಮೇಲ್ ಮಾಡಿದ್ದಾರೆ. ಅದರಲ್ಲಿ ಸಲಹೆ ನೀಡಿದ್ದು, ನಮ್ಮ ಕ್ಯಾಂಟೀನ್‍ಗಳು ಹಾಗೂ ಹೋಟೆಲ್‍ಗಳು ಬಾಳೆ ಎಲೆಗಳನ್ನು ಪ್ಲೇಟ್‍ಗಳನ್ನಾಗಿ ಬಳಸಿದಲ್ಲಿ ಬಾಳೆ ಬೆಳೆಯುವ ರೈತರಿಗೆ ಸಹಾಯವಾಗುತ್ತದೆ. ಬಾಳೆ ಬೆಳೆದ ರೈತರು ಸಂಕಷ್ಟದಲ್ಲಿದ್ದು, ಮಾರಾಟ ಮಾಡುವುದರಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಂತಹವರಿಗೆ ಇದರಿಂದ ಸಹಾಯವಾಗುತ್ತದೆ.

ನಮ್ಮ ಕಾರ್ಖಾನೆ ತಂಡಗಳು ಈ ಕುರಿತು ತಕ್ಷಣವೇ ಕ್ರಮ ವಹಿಸಬೇಕಿದೆ, ಧನ್ಯವಾದಗಳು ಎಂದು ನಿವೃತ್ತ ಪತ್ರಕರ್ತರು ಮನವಿ ಮಾಡಿದ್ದಾರೆ. ಈ ಸಾಲುಗಳನ್ನು ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದನ್ನು ತಮ್ಮ ಕೈಗಾರಿಕೆಯ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದ್ದು, ಮಹೀಂದ್ರಾ ಆಟೋದಲ್ಲಿ ಎಲ್ಲ ಕ್ಯಾಂಟೀನ್‍ಗಳಲ್ಲಿ ಪ್ಲೇಟ್‍ಗಳ ಬದಲು ಬಾಳೆ ಎಲೆಗಳಲ್ಲಿ ಆಹಾರ ನೀಡಲಾಗುತ್ತಿದೆಯಂತೆ.

ಈ ಕುರಿತು ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ರೀತಿಯ ಗುಣವುಳ್ಳ ಉದ್ಯಮಿಯಲ್ಲಿ ನಮ್ಮ ದೇಶದಲ್ಲಿ ಕಂಡಿಲ್ಲ. ನೀವು ನಮ್ಮ ದೇಶದಲ್ಲಿದ್ದೀರಿ ಎಂಬುದು ಖುಷಿ ವಿಚಾರ ಎಂದು ಕಮೆಂಟ್ ಮಾಡಿದ್ದಾರೆ. ಇದೊಂದು ಅದ್ಭುತ ಐಡಿಯಾ, ಎಲ್ಲರೂ ಈ ರೀತಿಯ ಆಲೋಚನೆಗಳನ್ನು ಮಾಡುವ ಮೂಲಕ ಸಣ್ಣ ಉದ್ಯಮಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

1200x675 phpu0yRue

ಆರ್ಥಿಕ ಸ್ನೇಹಿ, ಬಾಳೆ ಎಲೆಯಲ್ಲಿ ಊಟ ಮಾಡುವುದೇ ಒಂದು ಖುಷಿ, ಆರೋಗ್ಯಯುತ ಹಾಗೂ ಸಮತೋಲನ ಕಾಪಾಡಿಕೊಳ್ಳಲು ಉತ್ತಮ ವಿಧಾನವಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಆನಂದ್ ಮಹೀಂದ್ರಾ ಅವರ ಟ್ವೀಟ್‍ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *