ನಿನ್ನೆಗಿಂತ ಅರ್ಧದಷ್ಟು ಕಡಿಮೆ – 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ

Public TV
2 Min Read
Coronavirus India

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ನಿನ್ನೆಗಿಂತ ಇಂದು ಸೋಂಕಿತರ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 117ಕ್ಕೆ ಏರಿಕೆ ಕಂಡಿದೆ. ಈವರೆಗೆ ದೇಶದಲ್ಲಿ 4,421 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 326 ಜನರು ಚೇತರಿಸಿಕೊಂಡು ಡಿಸ್ಚಾರ್ಚ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿಯ ಮಾಹಿತಿ ಪ್ರಕಾರ ಭಾರತದಲ್ಲಿ 24 ಗಂಟೆಗಳಲ್ಲಿ 30 ಮಂದಿ ಸೋಂಕಿತರು ಮೃತಪಟ್ಟಿದ್ದರೆ, 693 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಸಾವು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಇಂದಿನ ವರದಿಯಲ್ಲಿ ಇಳಿಮುಖವಾಗಿದೆ.

ಕ್ಲಸ್ಟರ್ ನಿರ್ವಹಣೆಗೆ ಅನುಕೂಲವಾಗುವ ರೀತಿ ಸರ್ಕಾರವು ಒಂದು ತಂತ್ರವನ್ನು ಅನುಸರಿಸುತ್ತಿದೆ. ಈ ಕಾರ್ಯತಂತ್ರವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ವಿಶೇಷವಾಗಿ ಆಗ್ರಾ, ಗೌತಮ್ ಬುದ್ಧ ನಗರ, ಪತ್ತನಂತಿಟ್ಟ, ಭಿಲ್ವಾರ ಮತ್ತು ಪೂರ್ವ ದೆಹಲಿಯಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ಐಸಿಎಂಆರ್ ನ ಇತ್ತೀಚಿನ ಅಧ್ಯಯದ ಪ್ರಕಾರ, ಓರ್ವ ಕೊರೊನಾ ಸೋಂಕಿತ ರೋಗಿಯು ಲಾಕ್‍ಡೌನ್ ಆದೇಶಗಳನ್ನು ಅನುಸರಿಸದಿದ್ದರೆ ಅಥವಾ ಸಾಮಾಜಿಕ ದೂರ ಕಾಯ್ದುಕೊಳ್ಳದಿದ್ದರೆ 30 ದಿನಗಳಲ್ಲಿ 406 ಜನರಿಗೆ ಸೋಂಕು ತಗುಲಿಸಬಹುದು. ನಮ್ಮ ದೇಶದಲ್ಲಿ ವೈದ್ಯಕೀಯ ಅವಶ್ಯಕತೆಯ ಆಧಾರದ ಮೇಲೆ ನಾವು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಲಾವ್ ಅಗರ್‍ವಾಲ್ ಹೇಳಿದರು.

ಭಾರತೀಯ ರೈಲ್ವೆಯ 2,500 ಬೋಗಿಗಳಲ್ಲಿ 40,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸಿದೆ. ರೈಲ್ವೆ ಇಲಾಖೆ ಪ್ರತಿದಿನ 375 ಪ್ರತ್ಯೇಕ ಹಾಸಿಗೆಗಳನ್ನು ತಯಾರಿಸುತ್ತಿದೆ ಮತ್ತು ಇದು ದೇಶಾದ್ಯಂತ 133 ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಗೃಹ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್. ಶ್ರೀವಾಸ್ತವ್ ಮಾತನಾಡಿ, ಅಗತ್ಯ ಸರಕುಗಳು ಮತ್ತು ಸೇವೆಗಳ ಸ್ಥಿತಿ ಉತ್ತಮವಾಗಿದೆ. ಗೃಹ ಸಚಿವರು ಅಗತ್ಯ ಸರಕುಗಳ ಸ್ಥಿತಿಗತಿ ಮತ್ತು ಲಾಕ್‍ಡೌನ್ ಕ್ರಮಗಳ ಬಗ್ಗೆ ವಿವರವಾದ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಹೋರ್ಡಿಂಗ್ ಮತ್ತು ಕಪ್ಪು ಮಾರುಕಟ್ಟೆ ನಡೆಯದಂತೆ ನೋಡಿಕೊಳ್ಳಲು ಅವರು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಾಯಕ ನಿರ್ದೇಶಕ ಆರ್ ಗಂಗಖೇಡ್ಕರ್ ಮಾತನಾಡಿ, ಈವರೆಗೆ 1,07,006 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ 136 ಸರ್ಕಾರಿ ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು, 59 ಖಾಸಗಿ ಲ್ಯಾಬ್‍ಗಳಿಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *