ಉಡುಪಿ: ಕೊರೊನಾ ವೈರಸ್ ದೇಶವನ್ನು ಸ್ತಬ್ಧ ಮಾಡಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಜನೋಪಯೋಗಕ್ಕಾಗಿ ನಮ್ಮ ಮಠದ ವತಿಯಿಂದ ಹತ್ತು ಲಕ್ಷ ದೇಣಿಗೆ ಕೊಡುತ್ತಿದ್ದೇವೆ ಎಂದು ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೊರೊನಾ ವೈರಸ್ ಅನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ. ಈ ಬಗ್ಗೆ ನಮಗೆ ಅನುಮಾನ ಇದೆ. ಕೊರೊನಾ ನರಕಾಸುರನಂತೆ ಭಾಸವಾಗುತ್ತಿದೆ. ಕೊರೊನಾವನ್ನು ಉಲ್ಟಾ ಹೇಳಿದರೆ ನರಕ ಎಂದಾಗುತ್ತದೆ. ನರಕಾಸುರನ ಸಂಹಾರ ಮಾಡಲು ಕೃಷ್ಣನ ಅವತಾರ ಎತ್ತಿ ಬರಬೇಕಾಗಿದೆ. ಮಾನವ ಸಮುದಾಯ ಮಾಡಿದ ತಪ್ಪುಗಳಿಂದ ಈ ಪರಿಸ್ಥಿತಿ ಬಂದಿದೆ ಎಂದರು. ಇದೇ ವೇಳೆ ಐದು ಲಕ್ಷ ರೂ. ಮೌಲ್ಯದ ದಿನಸಿಯನ್ನು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಅವರ ಮೂಲಕ ಸ್ವಾಮೀಜಿ ಹಸ್ತಾಂತರ ಮಾಡಿದರು.
ನಾವು ಪ್ರಾಚೀನ ಮೌಲ್ಯಗಳನ್ನು ಬದಿಗೆ ಇಟ್ಟಿದ್ದೇವೆ. ಅನಗತ್ಯ ಪ್ರಾಣಿ ಸಂಹಾರದಿಂದ ಕೊರೊನಾ ಬಂದಿದೆ. ಮನುಷ್ಯನ ದೇಹಕ್ಕೆ ಸಸ್ಯಾಹಾರವೇ ಸೂಕ್ತ. ಮನುಷ್ಯ ಬದುಕಲು ಮಾಂಸಾಹಾರದ ಅಗತ್ಯ ಇಲ್ಲ. ಜೀವಂತ ಪ್ರಾಣಿಗಳನ್ನು ಹಿಡಿದು ತಿನ್ನುವುದರಿಂದ ಕೊರೊನಾ ಬಂದಿದೆ. ಮಾನವ ಸಮುದಾಯ ವಿಧ್ವಂಸಕ ಚಿಂತನೆಯಲ್ಲಿ ಸಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಭಗವಂತ ಭೂಮಿಯನ್ನು ಸೃಷ್ಟಿ ಮಾಡಿದ್ದು ಬದುಕುವುದಕ್ಕಾಗಿ. ಮನುಷ್ಯರು ಶಸ್ತ್ರಾಸ್ತ್ರ ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ. ಕೊರೊನಾದಿಂದ ಜಗತ್ತನ್ನು ನಾಶ ಮಾಡಬಹುದೆಂದು ದುಷ್ಟರಿಗೆ ಗೊತ್ತಾಗಿದೆ. ಉದ್ದೇಶಪೂರ್ವಕವಾಗಿ ಕೊರೊನಾ ಹರಡುವ ಪ್ರಯತ್ನವೂ ಆಗಬಹುದು. ಒಬ್ಬ ದುಷ್ಟ ನಿಂದ ಸಮಾಜಕ್ಕೆ ದೇಶಕ್ಕೆ ತೊಂದರೆಯಾಗುತ್ತದೆ. ಜಾಗತಿಕ ವೇದಿಕೆಯಲ್ಲಿ ಕೊರೊನಾ ಬಗ್ಗೆ ಚರ್ಚೆಯಾಗಲಿ. ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಕೊರೊನಾದ ವಿರುದ್ಧ ದೂರಗಾಮಿ ಆಲೋಚನೆಯ ಅಗತ್ಯತೆ ಇದೆ. ಇತರ ದೇಶಗಳನ್ನು ಕಂಡು ಸಮಸ್ಯೆಯ ತೀವ್ರತೆಯನ್ನು ಅರಿಯಬೇಕು. ಕೊರೊನಾದಿಂದ ಪುತ್ತಿಗೆ ಮಠದ ವಿದೇಶಿ ಬ್ರಾಂಚ್ ಗಳಿಗೆ ತೊಂದರೆಯಾಗಿದೆ. ಅಮೆರಿಕ, ಲಂಡನ್‍ನ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿ, ಅರ್ಚಕರು ಗೊಂದಲದಲ್ಲಿದ್ದಾರೆ. ಅಲ್ಲಿನ ಸರ್ಕಾರಗಳು ನಮಗೆ ಸಾಕಷ್ಟು ಸಹಾಯ ಮಾಡಿದೆ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.