ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಾಮ್‍ನಲ್ಲಿ ಇಂದು ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಸೇನೆ ಸೆದೆಬಡಿದಿದೆ.
ಕುಲ್ಗಾಮ್‍ನ ಡಿಹೆಚ್ ಪೊರಾದಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ತಂಡ(ಎಸ್‍ಒಜಿ) ಇಂದು ಬೆಳಗ್ಗಿನ ಜಾವ ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಾರ್ಯಾಚರಣೆ ವೇಳೆ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಪೊಲೀಸರು ಹಾಗೂ ಸೇನೆಯ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಆಗ ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭವಾಯ್ತು.
ಈ ದಾಳಿಯಲ್ಲಿ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ, ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದು, ಈ ಪ್ರದೇಶವನ್ನು ಸುತ್ತುವರಿದಿವೆ.