ಏ.14ರ ನಂತರ ಲಾಕ್‍ಡೌನ್ ಇರುತ್ತಾ? – ಏನೇನು ಬೆಳವಣಿಗೆಯಾಗಿದೆ?

Public TV
2 Min Read
Lockdown 13

ನವದೆಹಲಿ/ ಬೆಂಗಳೂರು: ಏಪ್ರಿಲ್ 14ರ ಬಳಿಕವೂ ದೇಶದಲ್ಲಿ ಲಾಕ್‍ಡೌನ್ ಮುಂದುವರೆಯುತ್ತಾ..? ಇಲ್ವಾ ಎಂಬ ಪ್ರಶ್ನೆಗಳು ಜನತೆಯಲ್ಲಿ ಮೂಡುತ್ತಿವೆ. ಈ ಮೊದಲೇ ಲಾಕ್‍ಡೌನ್ ಮುಂದುವರಿಕೆ ಕುರಿತ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದ ಕೇಂದ್ರ ಸರ್ಕಾರ, ಇದೀಗ ಏಪ್ರಿಲ್ 14ರ ನಂತರ ಲಾಕ್‍ಡೌನ್ ತೆರವು ಮಾಡುವ ಮುನ್ಸೂಚನೆ ನೀಡಿದೆ. ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಅರುಣಾಚಲಪ್ರದೇಶದ ಸಿಎಂ ಪೆಮಾ ಖಂಡು ಮಾಡಿರುವ ಟ್ವೀಟ್ ಲಾಕ್‍ಡೌನ್ ತೆರವು ಸುಳಿವನ್ನು ನೀಡಿತ್ತು.

ದೇಶದಲ್ಲಿ ವಿಧಿಸಲಾದ 21 ದಿನಗಳ ಲಾಕ್‍ಡೌನ್‍ನ್ನು ಏಪ್ರಿಲ್ 15ರಂದು ತೆರವು ಮಾಡಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಜನ ಮನೆಯಿಂದ ಹೊರಗೆ ಬಂದು ತಿರುಗಾಡಬಹುದು ಅಂತಲ್ಲ. ಜನ ಮನೆಯಿಂದ ಹೊರ ಬಂದರೂ ಕೆಲವು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಜವಾಬ್ದಾರಿಯುತ ಪ್ರಜೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್‍ನ್ನು ಕಟ್ಟಿ ಹಾಕಬಹುದು ಎಂದು ಪೆಮಾ ಖಂಡು ಟ್ವೀಟ್ ಮಾಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಡಿಲೀಟ್ ಆಯ್ತು. ಇದನ್ನೂ ಓದಿ: ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ

ಹಿಂದಿಯಲ್ಲಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಹೀಗೆ ಟ್ವೀಟ್ ಮಾಡಲಾಗಿದೆ ಎಂಬ ಸ್ಪಷ್ಟೀಕರಣ ಬಳಿಕ ಹೊರಹೊಮ್ಮಿತು. ಇತ್ತ, ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, 14ರವರೆಗೆ ನಾವು ಯಾವ ರೀತಿ ಇರುತ್ತೇವೆಯೋ ಅದರ ಮೇಲೆ ಲಾಕ್‍ಡೌನ್ ವಿಸ್ತರಣೆ ಮಾಡಬೇಕೋ ಬೇಡವೋ ಎನ್ನುವುದು ತೀರ್ಮಾನ ಆಗುತ್ತೆ ಎಂದಿದ್ದಾರೆ. ರೈಲ್ವೇ ಸಚಿವ ಸುರೇಶ್ ಅಂಗಡಿ ಮಾತನಾಡಿ, ದೇವರ ದಯೆಯಿದ್ರೆ ಏಪ್ರಿಲ್ 14ರ ನಂತ್ರ ರೈಲು ಓಡುತ್ತೆ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಒಂದಿಷ್ಟು ಬೆಳವಣಿಗೆ ನಡೆಯುತ್ತಿವೆ.

ರೈಲ್ವೇ ಬುಕ್ಕಿಂಗ್ ಶುರು:
ರೈಲ್ವೇ ಇಲಾಖೆಯ ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ಏಪ್ರಿಲ್ 15ರಿಂದ ಪ್ರಯಾಣ ಮಾಡಲು ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. 120 ದಿನಗಳ ಅವಧಿಪೂರ್ವ ಮೀಸಲು ನಿಯಮದ ಪ್ರಕಾರ ಆನ್‍ಲೈನ್ ಬುಕಿಂಗ್ ನಿಲ್ಲಿಸಿಲ್ಲ. ಲಾಕ್‍ಡೌನ್ ಅವಧಿಯನ್ನು ಮಾತ್ರ ಬುಕ್ಕಿಂಗ್ ಪರಿಗಣಿಸುತ್ತಿಲ್ಲ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ

Railway Station 2

ವಿಮಾನಗಳು ಹಾರಾಟಕ್ಕೆ ಸಜ್ಜು:
ಸ್ಪೈಸ್ ಜೆಟ್, ಇಂಡಿಗೋ, ಗೋ ಏರ್ ವಿಮಾನಗಳ ವೆಬ್‍ಸೈಟ್‍ಗಳಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿವೆ. ಏಪ್ರಿಲ್ 15ರಿಂದ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ಲಾಕ್‍ಡೌನ್ ತೆರವು ಬಳಿಕ ದೇಶಿಯ ವಿಮಾನಗಳ ಹಾರಾಟಕ್ಕೆ ಅವಕಾಶ ಸಿಗಲಿದೆ. ಆದ್ರೆ, ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಂತಾರಾಷ್ಟ್ರೀಯ ವಿಮಾನ ಸೇವೆ ಮೇಲಿನ ನಿರ್ಬಂಧವನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಸುವ ಸಾಧ್ಯತೆ ಇದೆ.

 

 

Share This Article
Leave a Comment

Leave a Reply

Your email address will not be published. Required fields are marked *