ತಬ್ಲಿಘಿ ಜಮಾತ್ ಸಭೆ- ಸಾವಿನ ಸಂಖ್ಯೆ 10ಕ್ಕೆ ಏರಿಕೆ, 300 ಮಂದಿ ಆಸ್ಪತ್ರೆಗೆ ದಾಖಲು

Public TV
2 Min Read
Tablighi Jamaat meet C

– 500 ಜನರಿಗೆ ಹೋಮ್ ಕ್ವಾರೆಂಟೈನ್

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲಿಘಿ ಜಮಾತ್ ಪ್ರಧಾನ ಕಚೇರಿಯು ಕೊರೊನಾ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 10 ಜನ ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ 300 ಮಂದಿಯಲ್ಲಿ  ಕೊರಾನಾ ಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಬ್ಲಿಘಿ ಜಮಾತ್‍ನಲ್ಲಿ ಮಾರ್ಚ್ 1ರಿಂದ 15ರವರೆಗೆ ಸಭೆ ನಡೆದಿತ್ತು. ಈ ಸಭೆಯಲ್ಲಿ ದೇಶ, ವಿದೇಶದ ಮುಸ್ಲಿಂ ಅನುಯಾಯಿಗಳು ಭಾಗವಹಿಸಿದ್ದರು. ಈ ಪೈಕಿ ಒಂಬತ್ತು ಭಾರತೀಯರು ತೆಲಂಗಾಣದಲ್ಲಿ ಆರು, ತಮಿಳುನಾಡು, ಕರ್ನಾಟಕ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

851527 corona testing kit

ದೆಹಲಿಯಲ್ಲಿ ಸೋಮವಾರ ವರದಿಯಾದ 25 ಕೊರೊನಾ ಹೊಸ ರೋಗಿಗಳಲ್ಲಿ 18 ಮಂದಿ ನಿಜಾಮುದ್ದೀನ್‍ನ ಸಭೆಯಲ್ಲಿ ಭಾಗವಹಿಸಿದ್ದರೇ ಆಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ 97 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 500ಕ್ಕೂ ಹೆಚ್ಚು ಜನರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.

ಜಮಾತ್ ಆಯೋಜಿಸಿದ್ದ ಜಾತ್ಯತೀತ ಸಭೆಗೆ ಹಾಜರಾಗಲು ಮಾರ್ಚ್ ಮೊದಲ ವಾರ 250 ವಿದೇಶಿ ಪ್ರಜೆಗಳು ದೆಹಲಿಗೆ ಆಗಮಿಸಿದ್ದರು. ಅವರಲ್ಲಿ ಅನೇಕರು ವಿವಿಧ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಅವರೊಂದಿಗೆ ಅನೇಕ ಭಾರತೀಯ ಅನುಯಾಯಿಗಳು ಸಹ ಸೇರಿದ್ದರು ಎಂದು ವರದಿಯಾಗಿದೆ.

Tablighi Jamaat meet

1,500ಕ್ಕೂ ಹೆಚ್ಚು ಸದಸ್ಯರು ಮಸೀದಿಯಲ್ಲಿದ್ದರು. ಅವರಲ್ಲಿ ಸುಮಾರು 300 ಮಂದಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಅವರಲ್ಲಿ ಹಲವರನ್ನು ಪ್ರತ್ಯೇಕವಾಗಿ ದೆಹಲಿಯ ವಿವಿಧ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಸಾಮಾನ್ಯವಾಗಿ ಬ್ಯಾಂಗಲ್ ವಾಲಿ ಮಸೀದಿ ಎಂದು ಕರೆಯಲ್ಪಡುವ ಜಮಾತ್‍ನ ಪ್ರಧಾನ ಕಚೇರಿಯನ್ನು ಮೊಹರು ಮಾಡಲಾಗಿದೆ. ಉಳಿದ ಎಲ್ಲ ಸದಸ್ಯರಿಗೆ ಕೋವಿಡ್ -19 ಹೋಮ್ ಕ್ವಾರೆಂಟೈನ್ ಸೀಲ್ ಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜಮಾತ್‍ನ ಸಾಗರೋತ್ತರ ಅನುಯಾಯಿಗಳು ಇತರರನ್ನು ಹೊರತುಪಡಿಸಿ ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಜನರು ಬಂದಿದ್ದರು. ನಿಜಾಮುದ್ದೀನ್ ಪ್ರಧಾನ ಕಚೇರಿಯಿಂದ ಸ್ಥಳೀಯ ಮಾರ್ಗದರ್ಶಿಗಳ ಜೊತೆಗೆ ಸೇರಿ ವಿವಿಧ ರಾಜ್ಯಗಳ ಮಸೀದಿಗಳಲ್ಲಿ ತಂಗಿದ್ದರು ಎಂದು ವರದಿಯಾಗಿದೆ.

Tablighi Jamaat meet A

ಮುಂಬೈನಿಂದ 10 ಜನರ ಗುಂಪು ಸಭೆಗಾಗಿ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಅವರಲ್ಲಿ ಒಬ್ಬರು, ಫಿಲಿಪೈನ್ಸ್‍ನ ಬೋಧಕ, ಕಸ್ತೂರಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಭಾರತೀಯ ಅನುಯಾಯಿಗಳಲ್ಲಿ ಒಬ್ಬರಾದ ಜಮ್ಮು ಮತ್ತು ಕಾಶ್ಮೀರದ 65 ವರ್ಷದ ವೃದ್ಧ ಕೆಲ ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. ಉಳಿದಂತೆ ಸೋಂಕು ತಗುಲಿದವರನ್ನು ಗುರು ತೇಜ್ ಬಹದ್ದೂರ್ (ಜಿಟಿಬಿ) ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *