ಲಾಕ್‍ಡೌನ್ ಎಫೆಕ್ಟ್, ಭಾರೀ ಬೇಡಿಕೆ – ಕೆಲ ದಿನಗಳಲ್ಲಿ ಖಾಲಿಯಾಗಲಿದೆ ಕಾಂಡೋಮ್

Public TV
2 Min Read

ಮಲೇಷ್ಯಾ: ಕೊರೊನಾ ವೈರಸ್ ವಿಶ್ವವ್ಯಾಪಿ ಹರಡುತ್ತಿರುವ ಪರಿಣಾಮ ಹಲವು ದೇಶಗಳನ್ನು ಲಾಕ್‍ಡೌಮ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಡೋಮ್ ಪೂರೈಕೆ ಕಡಿಮೆಯಾಗಿದೆ ಎಂದು ವಿಶ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಂಡೋಮ್ ಪೂರೈಕೆ ಮಾಡುವ ಸಂಸ್ಥೆ ಕಾರೆಕ್ಸ್ ಹೇಳಿಕೆ ನೀಡಿದೆ.

ಮಲೇಷಿಯಾದಲ್ಲಿ ಕಾಂಡೋಮ್ ತಯಾರಿಕಾ ಕಂಪನಿ ಕಾರೆಕ್ಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲಾಕ್‍ಡೌನ್ ಹಿನ್ನೆಲೆ ಕಳೆದ 10 ದಿನಗಳಿಂದ ಕಂಪನಿಯಲ್ಲಿ ಕಾಂಡೋಮ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

Condom Neaw 3

ಬೇಡಿಕೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಪೂರೈಕೆ ಶೇ. 50ರಷ್ಟು ಕುಸಿದಿದೆ. ನಮ್ಮ ಬಳಿ ಇರುವ ದಾಸ್ತಾನು ಎರಡು ತಿಂಗಳಲ್ಲಿ ಖಾಲಿಯಾಗಲಿದೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮಲೇಷಿಯಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ದೀರ್ಘಾವದಿಗೆ ಉತ್ಪಾದನೆ ನಿಲ್ಲಿಸಿದ್ದ ಕಾರೆಕ್ಸ್ ಶುಕ್ರವಾರವಷ್ಟೇ ಮತ್ತೆ ಕಾಂಡೋಮ್ ತಯಾರಿಕೆಯನ್ನು ಆರಂಭಿಸಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆ ಅರ್ಧ ಸಿಬ್ಬಂದಿಯ ಲಭ್ಯತೆಯೊಂದಿಗೆ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಓದಿ: ನಿಮ್ಮ ಮನೆ ಈಗ ‘ಕಾಂಡೋಮ್’ ಇದ್ದಂತೆ ‘ಎಸ್‍ಟಿಡಿ’ಯಿಂದ ರಕ್ಷಿಸಿಕೊಳ್ಳಿ – ಕಿವೀಸ್ ಕ್ರಿಕೆಟರ್

ಮಲೇಷ್ಯಾವನ್ನು ಹೊರತುಪಡಿಸಿ ಚೀನಾ, ಭಾರತ ಮತ್ತು ಥೈಲ್ಯಾಂಡ್‍ನಂತಹ ದೇಶಗಳು ಅತಿ ಹೆಚ್ಚು ಪ್ರಮಾಣದಲ್ಲಿ ಕಾಂಡೋಮ್ ಉತ್ಪಾದನೆಯ ಕಾರ್ಖಾನೆಗಳನ್ನು ಹೊಂದಿದೆ. ಆದರೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಈ ದೇಶಗಳಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಕಾಂಡೋಮ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಸಂಸ್ಥೆ ಹೇಳಿದೆ.

karex condoms

ಸೋಂಕು ಹರಡುವುದನ್ನು ತಡೆಯಲು ಬಹುತೇಕ ರಾಷ್ಟ್ರಗಳು ಲಾಕ್‍ಡೌನ್ ಘೋಷಿಸಿ, ಜನರನ್ನು ಮನೆಗಳಲ್ಲೇ ಇರುವಂತೆ ಸೂಚಿಸಿದೆ. ಹೀಗಿರುವಾಗಲೂ ಕಾಂಡೋಮ್‍ಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಆದರೆ ಅದರ ಉತ್ಪಾದನೆ ಮಾತ್ರ ಕುಸಿಯುತ್ತಿದೆ ಎಂದು ಕಾರೆಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಗೋಹ್ ಮೈಹ್ ಕೇತ್ ತಿಳಿಸಿದ್ದಾರೆ.

ಕಾರೆಕ್ಸ್ ಸಂಸ್ಥೆ 10 ದಿನಗಳಲ್ಲಿ 100 ಮಿಲಿಯನ್(10 ಕೋಟಿ) ಅಷ್ಟು ಕಾಂಡೋಮ್‍ಗಳನ್ನು ಉತ್ಪಾದಿಸಬಲ್ಲದು. ಈ ಕಾಂಡೋಮ್‍ಗಳು ವಿಶ್ವಾದ್ಯಂತ ಅನೇಕ ಬ್ರ್ಯಾಂಡ್‍ಗಳ ಹೆಸರಿನಲ್ಲಿ ಮಾರಾಟವಾಗುತ್ತದೆ. ಸುಮಾರು 140 ರಾಷ್ಟ್ರಗಳಿಗೆ ಕಾಂಡೋಮ್ ಅನ್ನು ಕಾರೆಕ್ಸ್ ಕಂಪನಿ ರಫ್ತು ಮಾಡುತ್ತದೆ. ಆದರೆ ಲಾಕ್‍ಡೌನ್ ಹಿನ್ನೆಲೆ ರಫ್ತು ವ್ಯವಸ್ಥೆ ಸ್ಥಗಿತಗೊಂಡಿದ್ದು, ಬೇರೆ ರಾಷ್ಟ್ರಗಳಿಗೆ ಕಾಂಡೋಮ್‍ಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗೋಹ್ ಮೈಹ್ ಕೇತ್ ಹೇಳಿದ್ದಾರೆ.

Condom 6

ಒಂದೆಡೆ ಬೇಡಿಕೆ ಹೆಚ್ಚುತ್ತಿದೆ, ಇನ್ನೊಂದೆಡೆ ಪೂರೈಕೆ ಕಡಿಮೆಯಾಗುತ್ತಿದೆ. ಇದರಿಂದ ಕಾಂಡೋಮ್ ಬೆಲೆ ಏರಿಕೆಯಾಗುತ್ತಿದೆ. ಬೇಡಿಕೆಯನ್ನು ಪೂರೈಸಲು ನಾವು ಉತ್ಪಾದನೆ ಹೆಚ್ಚಿಸಲು ನಮ್ಮ ಸಿಬ್ಬಂದಿಗೆ ಎಲ್ಲಾ ರೀತಿಯ ಸುರಕ್ಷಿತ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದರೆ ಕೊರೊನಾ ಭೀತಿಯಿಂದ ಸಿಬ್ಬಂದಿ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಅರ್ಧದಷ್ಟು ಜನ ಮಾತ್ರ ಕೆಲಸಕ್ಕೆ ಹಾಜರಾಗುತ್ತಿರುವ ಪರಿಣಾಮ ಉತ್ಪಾದನೆಯೂ ಕುಸಿಯಲಿದೆ ಎಂದು ಕಾರೆಕ್ಸ್ ಸಂಸ್ಥೆ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *