ಉತ್ತರ ಕನ್ನಡದಲ್ಲಿ ಮನೆಗೇ ಬರುತ್ತಿದೆ ಅಗತ್ಯ ವಸ್ತುಗಳು – ಸುಮ್ನೇ ಓಡಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್

Public TV
2 Min Read
kwr agatya vastu 2

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಅನಾವಶ್ಯಕವಾಗಿ ಮನೆಯಿಂದ ಹೊರ ಬಂದು ಓಡಾಟ ನಡೆಸುವುದನ್ನ ತಪ್ಪಿಸಲು ಜಿಲ್ಲಾಡಳಿತ ಕ್ರಮ ತಗೆದುಕೊಂಡಿದೆ. ಮನೆ ಬಾಗಿಲಿಗೆ ವಸ್ತುಗಳನ್ನ ಕೊಡುವ ಕ್ರಮಕ್ಕೆ ಜಿಲ್ಲಾಡಳಿತ ಇಂದಿನಿಂದಲೇ ಚಾಲನೆ ನೀಡಿದೆ.

ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಎನ್ನುವಂತೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದ್ದು ಈಗಾಗಲೇ ಅಗತ್ಯ ವಸ್ತುಗಳ ಮಾರಾಟಗಾರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಪಾಸ್ ವಿತರಣೆ ಮಾಡಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‍ಡೌನ್ ಮಾಡಿದ್ದರೂ ಅಗತ್ಯ ವಸ್ತುಗಳ ಖರೀದಿ ನೆಪ ಹೇಳಿ ಹಲವರು ಜಿಲ್ಲೆಯಲ್ಲಿ ಅನವಶ್ಯಕವಾಗಿ ಮನೆ ಬಿಟ್ಟು ಹೊರ ಬರುತ್ತಿದ್ದಾರೆ.

kwr agatya vastu

ಜನರು ಗುಂಪು ಗುಂಪಾಗಿ ಸೇರುತ್ತಿರುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಇಂದಿನಿಂದಲೇ ವಿತರಣೆ ಮಾಡುತ್ತಿದೆ. ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ, ಮೊಟ್ಟೆ, ಸೀಲ್ಡ್ ನೀರನ್ನ ವ್ಯಾಪಾರಸ್ಥರ ಮೂಲಕ ಮನೆಗಳ ಬಳಿಯೇ ಬಂದು ವಿತರಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತ್ಯೇಕ ವಾರ್ಡುಗಳಿಗೆ ವ್ಯಾಪಾರಸ್ಥರನ್ನ ವಿಂಗಡಿಸಿ ವಸ್ತುಗಳ ವಿತರಣೆ ಮಾಡಲಾಗುತಿದ್ದು, ಈ ಮೂಲಕ ಜನರು ಹೊರ ಹೋಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

kwr agatya vastu 1

ಸುಮ್ಮ ಸುಮ್ಮನೆ ಓಡಾಡುವವರಿಗೆ ಶಿಕ್ಷೆ ಏನು ಗೊತ್ತಾ?
ಜಿಲ್ಲಾಡಳಿತದ ಆದೇಶ ಮೀರುವವರ ವಿರುದ್ಧ ಇನ್ನು ಖಡಕ್ ಆ್ಯಕ್ಷನ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ. ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ ತಿರುಗುವವರನ್ನು ಇನ್ನು ಸುಮ್ಮನೇ ಬಿಡುವ ಮಾತಿಲ್ಲ. ಗಂಭೀರ ಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಮಾಡುವವರನ್ನು ಸಾರ್ವಜನಿಕವಾಗಿಯೇ ತೋರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಇದು ಶುಕ್ರವಾರದಿಂದ ಚಾಲ್ತಿಗೆ ಬರಲಿದೆ.

kwr agatya vastu 3

ಪ್ರಥಮ ಬಾರಿ ನಿಯಮ ಉಲ್ಲಂಘಿಸಿದಲ್ಲಿ ಕೈ ಮೇಲೆ ಅಳಿಸಲಾಗದ ಇಂಕ್ ಸೀಲ್ ಹಾಕಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ಸಾರ್ವಜನಿಕವಾಗಿ ಹಾಗೂ ವ್ಯಕ್ತಿಯ ಮನೆಯ ಬಳಿ ಆತನ ಹೆಸರನ್ನು ಮೈಕ್ ಮೂಲಕ ಘೋಷಣೆ ಮಾಡಿ ಮಾನ ಹರಾಜು ಹಾಕಲಾಗುತ್ತೆ. ಇದಕ್ಕೂ ಮೀರಿ ಮೂರನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ವ್ಯಕ್ತಿಯ ಫೋಟೋ ಜಿಲ್ಲಾಡಳಿತದ ವೆಬ್‍ಸೈಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ನಿಯಮ ಉಲ್ಲಂಘಿಸುವವರ ವಾಹನದ ರಿಜಿಸ್ಟ್ರೇಶನ್ ಹಾಗೂ ಲೈಸೆನ್ಸ್ ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

kwr agatya vastu 4

ಜನರು ಮನೆಯಲ್ಲೇ ಇರಿ, ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ದಿನನಿತ್ಯದ ಅಗತ್ಯ ಸಾಮಾನುಗಳನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಜನರು ನಿಯಮ ಉಲ್ಲಂಘಿಸುವುದನ್ನು ಸರಿಮಾಡಲು ಸಮಯ ವ್ಯರ್ಥವಾಗುತ್ತಿದೆ, ಜನರು ನಿಯಮ ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಾಥ್ ನೀಡಿದಲ್ಲಿ ಜನರಿಗೆ ಎಲ್ಲಾ ಅಗತ್ಯ ವಸ್ತುಗಳ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *