ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಲಾಕ್‍ಡೌನ್‍ಗೆ ಸರ್ಕಾರ ಸೂಚಿಸಿದ್ದು, ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳುವಂತೆ ಹೇಳಲಾಗಿದೆ. ಹೀಗಾಗಿ ಈ ಆದೇಶವನ್ನು ಪಾಲಿಸುತ್ತಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಂಗಾಪುರ ಹಾಗೂ ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದ ಗ್ರಾಮಸ್ಥರು ಅವರ ಗ್ರಾಮಗಳಿಗೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.
ಮೂರು ವಾರಗಳ ಕಾಲ ಗ್ರಾಮಕ್ಕೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿರುವ ಆಯಿತೋಳು ಹಾಗೂ ಶ್ರೀರಂಗಾಪುರ ಗ್ರಾಮಗಳ ಜನರು ಕೊರೊನಾ ನಿಯಂತ್ರಣಕ್ಕೆ ಸ್ವಯಂ ಪರಿಪಾಲನೆಯಷ್ಟೆ ಮುಖ್ಯ ಎಂದು ತೀರ್ಮಾನಿಸಿದ್ದು, ಗ್ರಾಮಕ್ಕೆ ವಲಸಿಗರು ಯಾರೂ ಬರುವಂತಿಲ್ಲ ಹಾಗೂ ಯಾರು ಸಹ ಗ್ರಾಮದಿಂದ ಹೊರ ಹೋಗುವಂತಿಲ್ಲ ಎಂದು ನಿರ್ಬಂಧ ಹೇರಿಕೊಂಡಿದ್ದಾರೆ.
ಒಂದು ದಿನದಲ್ಲಿ ಗ್ರಾಮಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಗ್ರಾಮದ ಹಿರಿಯರೆಲ್ಲರೂ ಸೇರಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಹಾಗೆಯೇ ಕೊರೊನಾ ಮಹಾಮಾರಿ ಹರಡದಂತೆ ತಡೆಯಲು ಮತ್ತು ಹಳ್ಳಿಗಳ ಸ್ವಾಸ್ಥ್ಯ ಕಾಪಾಡಲು, ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ತರಲು ಕರಪತ್ರಗಳನ್ನು ಹಂಚುತ್ತಿದ್ದಾರೆ. ಜೊತೆಗೆ ಬಿತ್ತಿ ಪತ್ರ ಹಾಗೂ ಬ್ಯಾನರ್ ಹಾಕುವ ಮೂಲಕ ಕೇಂದ್ರ ಸರ್ಕಾರದ ಆದೇಶ ಪಾಲಿಸಲು ಮನವಿ ಮಾಡಿದ್ದಾರೆ.