ಉಡುಪಿ: ಮಂಗಳೂರಿನಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವುದರಿಂದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಉಡುಪಿಯಿಂದ ಮಂಗಳೂರಿಗೆ ಹೋಗುವ ಸಾರ್ವಜನಿಕ ಬಸ್ ಸೇವೆ ತಡೆಯಲಾಗಿದೆ. ಉಡುಪಿಯ ಹೆಜಮಾಡಿ ಗಡಿಯಲ್ಲೇ ರಸ್ತೆತಡೆ ಮಾಡಿರುವ ಪೊಲೀಸರು, ಮಂಗಳೂರಿನಿಂದ ಬರುವ ವಾಹನಗಳಿಗೆ ಉಡುಪಿ ಜಿಲ್ಲೆಗೆ ನೋ ಎಂಟ್ರಿ ಎಂದಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಾರ್ವಜನಿಕರ ವಾಗ್ವಾದ ನಡೆದಿದೆ. ದ್ವಿಚಕ್ರ ವಾಹನವೂ ಸೇರಿ ಯಾವುದೇ ವಾಹನಗಳನ್ನು ಗಡಿ ದಾಟಲು ಪೊಲೀಸರು ತಡೆಯೊಡ್ಡಿದರು.
ಕೆಲಕಾಲ ಗಡಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದೆ ಬಂದಿರುವ ಹೊರಜಿಲ್ಲೆಯ ಪ್ರಯಾಣಿಕರ ಪರದಾಟ ನಡೆಸಿದರು. ಸಂಬಂಧಿಕರನ್ನು ಕರೆತರುವ ಉದ್ದೇಶದಿಂದ ಓಡಾಟ ನಡೆಸುವವರು ಗೊಂದಲಕ್ಕೀಡಾದರು. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಕಾರವಾರ, ಗೋವಾ ಕಡೆ ಹೋಗುವವರು ಹೆದ್ದಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಜನರ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ವಾಹನ ನಿಷೇಧ ಸಡಿಲಿಕೆ ಮಾಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸ್ಪಷ್ಟ ಆದೇಶವಿಲ್ಲದ ಕಾರಣ ಪೊಲೀಸರಿಗೂ ವಾಹನ ತಡೆ ಸಾಧ್ಯವಾಗುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದೂಡಲಾಗಿದೆ. ರಜೆ ನೀಡಲಾಗಿರುವುದರಿಂದ ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಹೊರಟ ಪೋಷಕರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲಾಧಿಕಾರಿ ಮತ್ತು ಎಸ್‍ಪಿಯವರ ಆದೇಶಕ್ಕೆ ಪೊಲೀಸರು ಕಾಯುತ್ತಿದ್ದಾರೆ.