ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬುಧವಾರ ಮಹತ್ವದ ಆದೇಶಗಳನ್ನು ನೀಡಿದ್ದ ಕೇಂದ್ರ ಆರೋಗ್ಯ ಇಲಾಖೆ ಈಗ ಎಲ್ಲ ರಾಜ್ಯಗಳಿಗೂ ಕೆಲವು ನಿರ್ದೇಶನಗಳನ್ನು ನೀಡಿದೆ.
ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದರ್ಶಿ ಪ್ರೀತಿ ಸುದನ್, ಆಯಾ ರಾಜ್ಯಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಿಲುವಿನಂತೆ ರಾಜ್ಯಗಳಲ್ಲೂ ಸರ್ಕಾರಿ ಕಚೇರಿಗಳಲ್ಲಿ ದಟ್ಟಣೆ ಕಡಿಮೆ ಮಾಡಲು ಕೆಲಸ ಸಮಯದ ನಿರ್ವಹಣೆ ಮಾಡಿ ಕಚೇರಿಗಳಲ್ಲಿ ಹೆಚ್ಚು ದಟ್ಟನೆಯಾಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳ ಸಮಯ ಬದಲಿಸಿ ಸಾಧ್ಯವಿದ್ದ ಖಾಸಗಿ ಸಂಸ್ಥೆಗಳಲ್ಲಿ ಮನೆಯಿಂದ ಕೆಲಸ ಮಾಡಲು ಸೂಚಿಸಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ಹೆಚ್ಚು ಜನಸಂಖ್ಯೆ ಸೇರುವ ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳು, ವಸ್ತು ಸಂಗ್ರಹಾಲಯಗಳು, ಜಿಮ್‍ಗಳು, ಪರೀಕ್ಷಾ ಕೇಂದ್ರಗಳು ಇತ್ಯಾದಿಗಳನ್ನು ಕ್ಲೋಸ್ ಮಾಡಿ. ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳು, ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಎಚ್ಚರಿಕೆ ವಹಿಸಿ. ಬಸ್ ಮೆಟ್ರೋ ರೈಲು ವಿಮಾನ ನಿಲ್ದಾಣಗಳಲ್ಲಿ ಜನ ಸಮೂಹ ಸೇರದಂತೆ ನೋಡಿಕೊಳ್ಳಬೇಕು. ಸೋಂಕು ಹರಡಂತೆ ಎಚ್ಚರಿಕೆ ವಹಿಸಬೇಕು ಮತ್ತು ಜನರ ನಡುವೆ ಅಂತರ ಕಾಯ್ದುಕೊಳ್ಳಲು ಜಾಗೃತಿ ಮೂಡಿಸಿಲು ಸೂಚಿಸಿದೆ.
ಆರೋಗ್ಯ ಕಾರಣಗಳು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಹೊರೆತುಪಡಿಸಿ ಹಿರಿಯ ನಾಯಕರು ಮನೆಯಿಂದ ಹೊರಬಾರದಂತೆ ಸೂಚನೆ ನೀಡಿ. ಹತ್ತು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಉಳಿಸಿಕೊಳ್ಳಲು ಸಲಹೆ ನೀಡಿ ಸಾರ್ವಜನಿಕ ಸ್ಥಳಗಳಿಂದ ಅಂತರ ಕಾಯ್ದುಕೊಳ್ಳಲು ಸೂಚಿಸಿ ಮಾಸ್ಕ್ ಸ್ಯಾನಿಟೈಜರ್ ಸೇರಿ ಔಷಧಿಗಳನ್ನು ಲಭ್ಯತೆ ಖಚಿತಪಡಿಸಿಕೊಂಡು ಬೆಲೆ ಏರಿಕೆಯಾಗದಂತೆ ನಿಯಂತ್ರಿಸಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.