ಚಾಮರಾಜನಗರ: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೂ ಅದರ ಬಿಸಿ ತಟ್ಟಿದೆ.
ಕೊರೊನಾ ವೈರಸ್ ಭೀತಿಯಿಂದ ಮಾದಪ್ಪನ ಯುಗಾದಿ ಜಾತ್ರೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ತಿಂಗಳ 21ರಿಂದ 25ರವರೆಗೆ ನಡೆಯುವ ಮಾದಪ್ಪನ ಯುಗಾದಿ ಜಾತ್ರೆಯು, ಈ ವರ್ಷ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಸರಳವಾಗಿ ಆಚರಿಸಲು ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ನಿಶ್ಚಯಿಸಿದೆ. ಈ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ಅವರು ತಿಳಿಸಿದ್ದಾರೆ.
ಕೊಠಡಿಗಳು, ವಸತಿಗೃಹಗಳನ್ನು ಬರುವ ಭಕ್ತಾದಿಗಳಿಗೆ ಕೊಡದಿರಲು ಪ್ರಾಧಿಕಾರ ತೀರ್ಮಾನಿಸಿದ್ದು, ರಂಗಮಂದಿರ ಸಮೀಪ ಸಾವಿರಾರು ಮಂದಿ ಟೆಂಟ್ ಹಾಕುವುದಕ್ಕೂ ಬ್ರೇಕ್ ಹಾಕಲಾಗಿದೆ. ರಸ್ತೆಬದಿಯಲ್ಲಿ, ಮಾದಪ್ಪನ ಬೆಟ್ಟದ ಸಮೀಪದ ಸ್ಥಳಗಳಲ್ಲಿ ಸಹಸ್ರಾರು ಮಂದಿ ತಂಗಲು-ವಾಸ್ತವ್ಯ ಹೂಡಲು ಪ್ರಾಧಿಕಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಲಕ್ಷಾಂತರ ಮಂದಿ ಸೇರುತ್ತಿದ್ದ ಯುಗಾದಿ ಜಾತ್ರೆಗೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದ್ದು, ಪ್ರಾಧಿಕಾರದ ಆದಾಯಕ್ಕೂ ಕತ್ತರಿ ಬೀಳಲಿದೆ.