ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಬಾಕ್ಸರ್ ಎಂಬ ತೆಲುಗಿನ ಚಿತ್ರಕ್ಕಾಗಿ ಟಾಲಿವುಡ್ ಮತ್ತೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಲಿವುಡ್‍ನಲ್ಲಿ ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಉಪ್ಪಿ, 2015 ರಲ್ಲಿ ತೆರೆಕಂಡಿದ್ದ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಯಾವುದೇ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ವರುಣ್ ತೇಜ್ ಅಭಿನಯದ ಬಾಕ್ಸರ್ ಚಿತ್ರದಲ್ಲಿ ಉಪ್ಪಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತದೆ.
ಕಬ್ಜ, ಬುದ್ಧಿವಂತ-2, ಹೋಂ ಮಿನಿಸ್ಟರ್ ಮತ್ತು ರವಿಚಂದ್ರ ಎಂಬ ಸಾಲು ಸಾಲು ಚಿತ್ರದಲ್ಲಿ ಬ್ಯುಸಿ ಇರುವ ಉಪ್ಪಿ, ತೆಲುಗಿನಲ್ಲಿ ಹೊಸ ನಿರ್ದೇಶಕ ಕಿರಣ್ ಕೊರ್ರಪಟ್ಟಿ ನಿರ್ದೇಶನದ ಬಾಕ್ಸರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಈಗಾಗಲೇ ಚಿತ್ರತಂಡ ಉಪೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದೆ ಎಂದು ಹೇಳಲಾಗಿದೆ. ಎಲ್ಲ ಅಂದುಕೊಂಡಂತೆ ಅದರೆ ಉಪ್ಪಿ ತೆಲುಗಿನಲ್ಲಿ ಮತ್ತೆ ಅಭಿನಯಿಸಲಿದ್ದಾರೆ.
ಈ ಬಾಕ್ಸರ್ ಚಿತ್ರಕ್ಕೆ ತೆಲುಗಿನ ವರುಣ್ ತೇಜ್ ನಾಯಕರಾಗಿದ್ದು, ಈ ಚಿತ್ರದಲ್ಲಿ ಅವರು ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಬಹುಮುಖ್ಯವಾದ ಅತಿಥಿ ಪಾತ್ರವಿದ್ದು, ಅದಕ್ಕೆ ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋ ಒಬ್ಬರ ಆಗತ್ಯವಿದೆ. ಈ ಕಾರಣಕ್ಕಾಗಿ ಚಿತ್ರತಂಡ ಉಪ್ಪಿ ಅವರನ್ನು ಸಂಪರ್ಕಿಸಿದೆ. ಉಪೇಂದ್ರ ಅವರು ಈ ಹಿಂದೆ ಸತ್ಯಂ, ಟಾಸ್, ಒಕೆ ಮಾಟಾ ಹೀಗೆ ಹಲವು ತೆಲಗು ಚಿತ್ರದಲ್ಲಿ ನಟಿಸಿದ್ದರು.
ಸದ್ಯ ಉಪ್ಪಿ ಅವರು ಕಬ್ಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆರ್.ಚಂದ್ರು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂಲಕ ಐ ಲವ್ ಯು ಚಿತ್ರದ ಬಳಿಕ ಮತ್ತೆ ಉಪೇಂದ್ರ ಹಾಗೂ ಆರ್.ಚಂದ್ರು ಜೋಡಿ ಒಂದಾಗುತ್ತಿದೆ. ಚಿತ್ರ ಭೂಗತ ಲೋಕದ ಕಥೆಯನ್ನು ಒಳಗೊಂಡಿದೆ. ಬರೀ ಲಾಂಗು, ಮಚ್ಚು ಮಾತ್ರವಲ್ಲದೆ ಲವ್ ಹಾಗೂ ಸೆಂಟಿಮೆಂಟ್‍ಗಳನ್ನೂ ಒಳಗೊಂಡಿದೆಯಂತೆ. ಅಲ್ಲದೆ ಉಪೇಂದ್ರ ನಿರ್ದೇಶನದ ಓಂ ಚಿತ್ರಕ್ಕೆ ಇದನ್ನು ಹೋಲಿಸಲಾಗುತ್ತಿದೆ.