ಬೆಂಗಳೂರು: ಸ್ವಿಫ್ಟ್ ಡಿಸೈರ್ ಕಾರೊಂದು ಡಿವೈಡರ್ ನಿಂದ ಹಾರಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಯಂಟಗಾನಹಳ್ಳಿ ಬಳಿ ನಡೆದಿದೆ.
ಕಾವೇರಮ್ಮ, ರಶ್ಮಿ, ಶಿವಕುಮಾರ್ ಮತ್ತು ಕಿರಣ್ ಮೃತ ದುರ್ದೈವಿಗಳು. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ವಿಫ್ಟ್ ಡಿಸೈರ್ ಕಾರು ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಮತ್ತೊಂದು ಕಾರು ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿತ್ತು. ಆದರೆ ನೆಲಮಂಗಲ ಸಮೀಪದ ಯಂಟಗಾನಹಳ್ಳಿ ಬಳಿ ಸ್ವಿಫ್ಟ್ ಡಿಸೈರ್ ಕಾರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಹಾರಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಈ ಅಪಘಾತದಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಲಮಂಗಲ-ಹಾಸನ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಅಪಘಾತ ನಡೆದ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಈ ಘಟನೆ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.