ದಡಿಘಟ್ಟದ ಲಕ್ಷ್ಮಿದೇವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ದೇಗುಲದಲ್ಲಿ ಪೂಜೆ ಸಲ್ಲಿಸಿದ ವಾಹನಕ್ಕೆ ಅಪಘಾತವೇ ಆಗಲ್ವಂತೆ

Public TV
1 Min Read
hsn temple

ಹಾಸನ: ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಭೀಕರ ಅಪಘಾತಗಳು ಭಯ ಹುಟ್ಟಿಸುತ್ತಿವೆ. ಆದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಡಿಘಟ್ಟ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನಕ್ಕೆ ತೆರಳಿ ವಾಹನಕ್ಕೆ ಪೂಜೆ ಸಲ್ಲಿಸಿದರೆ ಅಪಘಾತವೇ ಆಗುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಇಲ್ಲಿ ಜಾತ್ರೆಯ ಸಮಯದಲ್ಲಿ ವಾಹನಗಳ ಪೂಜೆಗೆ ವಿಶೇಷ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ.

hsn temple 2

ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಒಂದು ವಾರಗಳ ಕಾಲ ಲಕ್ಷ್ಮಿದೇವಿ ದೇವರ ಜಾತ್ರೆ ಅದ್ದೂರಿಯಾಗಿ ನಡೆಯುತ್ತೆ. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆ ನಡೆಯುವ ಒಂದು ದಿನ ಸುಮಾರು 25 ಸಾವಿರದಷ್ಟು ಜನರಿಗೆ ಅನ್ನದಾನ ಕೂಡ ಏರ್ಪಡಿಸಲಾಗಿರುತ್ತದೆ. ಇದಿಷ್ಟೆ ಆಗಿದ್ದರೆ ಈ ಜಾತ್ರೆ ಅಷ್ಟೊಂದು ವಿಶೇಷ ಅನ್ನಿಸುತ್ತಿರಲಿಲ್ಲ. ಜಾತ್ರೆಯ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ತಮ್ಮ ವಾಹನದೊಂದಿಗೆ ಬಂದು ಪೂಜೆ ಸಲ್ಲಿಸಿದರೆ ಆ ವಾಹನ ಅಪಘಾತವೇ ಆಗೋದಿಲ್ಲ ಎಂಬ ನಂಬಿಕೆಯಿದೆ. ಒಂದು ವೇಳೆ ಅಪಘಾತ ಆದರೂ ಸಾವು, ನೋವು ಸಂಭವಿಸದಂತೆ ಈ ದೇವಿ ಕಾಯುತ್ತಾಳೆ ಎಂದು ಭಕ್ತರು ನಂಬಿದ್ದಾರೆ.

hsn temple 3

ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಗೆ ವಾಹನ ಮಾಲೀಕರು ತಮ್ಮ ವಾಹನಗಳೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸೋದು ಸಾಮಾನ್ಯ. ಜಾತ್ರೆಯ ಸಮಯದಲ್ಲಿ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದವರು ಬಿಡುವಿನ ಸಮಯದಲ್ಲಿ ತಮ್ಮ ವಾಹನದೊಂದಿಗೆ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಮಾಡಿಸುತ್ತಾರೆ. ಈ ದೇವಾಲಯದ ಸುತ್ತ ತಮ್ಮ ವಾಹನ ಪ್ರದಕ್ಷಿಣೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ತಮ್ಮ ವಾಹನ ಅಪಘಾತವೇ ಆಗಿಲ್ಲ ಎಂದು ಹಲವು ಭಕ್ತರು ಹೇಳಿಕೊಂಡಿದ್ದಾರೆ.

hsn temple 4

ಒಂದೊಂದು ದೇವಾಲಯದಲ್ಲಿ ಒಂದೊಂದು ನಂಬಿಕೆಯಿರುತ್ತೆ. ಅದೇ ರೀತಿ ಈ ದೇವಾಲಯದಲ್ಲಿ ತಾವು ಬೇಡಿದ ಎಲ್ಲ ಬೇಡಿಕೆ ಈಡೇರುತ್ತೆ ಎಂಬ ನಂಬಿಕೆ ಇದೆ. ಅದರಲ್ಲೂ ತಾವು ಈ ದೇವಸ್ಥಾನಕ್ಕೆ ವಾಹನ ತಂದು ಪೂಜೆ ಸಲ್ಲಿಸಿದರೆ ಆ ವಾಹನ ಅಪಘಾತವೇ ಆಗೋದಿಲ್ಲ ಎಂಬ ನಂಬಿಕೆ ಮಾತ್ರ ವಾಹನ ಮಾಲೀಕರನ್ನ ದೇವಸ್ಥಾನದತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *