– 2ನೇ ಮಗು ಗರ್ಭಪಾತ
– ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಸೂಸೈಡ್
ಚೆನ್ನೈ: ತಾಯಿಯೊಬ್ಬಳು ತನ್ನ ಒಂದು ವರ್ಷದ ಮಗುವಿನೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ರಾಯ್‌ಪೆಟ್ಟಾದಲ್ಲಿ ನಡೆದಿದೆ.
ಲತಾ (27) ಮತ್ತು ನಿಖಿತಾ (1) ಮೃತ ತಾಯಿ-ಮಗಳು. ಸತ್ಯನಾರಾಯಣನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಈತ ಲತಾಳನ್ನು ಮದುವೆಯಾಗಿದ್ದನು. ಈ ದಂಪತಿಗೆ ಒಂದು ವರ್ಷದ ಮಗಳು ಇದ್ದಳು. ಲತಾ 2ನೇ ಮಗುವಿಗೆ ಗರ್ಭಿಣಿಯಾಗಿದ್ದಳು.
ಕೆಲವು ದಿನಗಳ ಹಿಂದೆ ಲತಾಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಲತಾಗೆ ಗರ್ಭಪಾತವಾಗಿದ್ದು, ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿ ಮನೆಗೆ ಬಂದಿದ್ದಾಳೆ. ಆದರೂ ರಕ್ತಸ್ರಾವ ನಿಂತಿರಲಿಲ್ಲ. ಮರುದಿನ ಪತಿ ಎಂದಿನಂತೆ ಕೆಲಸಕ್ಕೆ ಹೋಗಿದ್ದನು.
ಇತ್ತ ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಮಗುವಿನ ಜೊತೆ ತಾನೂ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈಕೆಯ ಕಿರುಚಾಟ ಕೇಳಿದ ಸ್ಥಳೀಯರು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆದರೆ ಅಷ್ಟರಲ್ಲೇ ತಾಯಿ ಮತ್ತು ಮಗು ಇಬ್ಬರು ಮೃತಪಟ್ಟಿದ್ದರು. ನಂತರ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಲತಾ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.