ಬೆಂಗಳೂರು: ಒಂದು ವೋಟಿಗೆ ಎರಡು ಸರ್ಕಾರ ತಂದವರು ಮಾತಿಗೆ ತಪ್ಪಿ ನಡೆದುಕೊಂಡ್ರು. ಏನಾಯ್ತು ಒಂದು ವೋಟು ಎರಡು ಸರ್ಕಾರದ ಕಥೆ ಅಂತ ಸರ್ಕಾರದ ವಿರುದ್ಧವೇ ಯುದ್ಧ ಸಾರಲು ವಿಪಕ್ಷ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಬಜೆಟ್ ಹಾಗೂ ಯೋಜನೆಗಳ ಆಧಾರದ ಮೇಲೆ ಕಾಂಗ್ರೆಸ್ ನಾಯಕರುಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ. ಯಾವುದೇ ಹೊಸ ಯೋಜನೆ ಇಲ್ಲ. ಕೇಂದ್ರದಿಂದ ಸಿಗಬೇಕಾದ ನೆರವು ಪಡೆದಿಲ್ಲ. ಇದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಾಗೂ ಹೋರಾಟ ಹಮ್ಮಿಕೊಳ್ಳಲು ಕೈ ಪಾಳಯ ಮುಂದಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಒಂದು ವೋಟಿಗೆ ಎರಡು ಸರ್ಕಾರ ಎಂದು ಬಿಜೆಪಿ ಪ್ರಚಾರ ಮಾಡಿತ್ತು. ಆ ಮೂಲಕ ಕೇಂದ್ರದಲ್ಲೂ ಬಿಜೆಪಿ ರಾಜ್ಯದಲ್ಲೂ ಬಿಜೆಪಿ ಬಂದರೆ ಅಭಿವೃದ್ಧಿ ಸಾಧ್ಯ ಎಂದು ಮತ ಕೇಳಲಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಹಾಕುವ ಒಂದು ವೋಟು ಎರಡು ಸರ್ಕಾರವನ್ನ ಅಧಿಕಾರಕ್ಕೆ ತರಲಿದೆ ಅನ್ನೋ ಬಿಜೆಪಿ ಘೋಷಣೆಯನ್ನೇ ಹೋರಾಟವಾಗಿ ಕೈಗೆತ್ತಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಒಂದು ವೋಟಿಗೆ ಎರಡು ಸರ್ಕಾರ ಬಂದು ಪ್ರಯೋಜನ ಏನು ಅನ್ನೋ ಹೋರಾಟವನ್ನು ರಾಜ್ಯದಲ್ಲಿ ನಡೆಸಲು ಕೈ ಪಾಳಯ ಸಿದ್ಧತೆ ನಡೆಸಿದೆ. ಆರ್ಥಿಕ ಮುಗ್ಗಟ್ಟು, ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ ಮಾಡದಿರುವುದು. ಎಸ್‍ಸಿಪಿ ಟಿಎಸ್‍ಪಿಗೆ ಹಣ ಕಡಿತ, ಸಾಲ ಮನ್ನದ ಪ್ರಸ್ತಾಪ ಇಲ್ಲದಿರುವುದು, ಅಲ್ಪ ಸಂಖ್ಯಾತರ ಕಡೆಗಣನೆ ಹೀಗೆ ಸಾಲು ಸಾಲು ಆರೋಪಗಳನ್ನ ಮುಂದಿಟ್ಟುಕೊಂಡು ಅಖಾಡಕ್ಕಿಳಿಯಲು ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಆ ಮೂಲಕ ಎಲ್ಲಿ ಹೋಯ್ತು ಒಂದು ವೋಟು…? ಎರಡು ಸರ್ಕಾರದ ಅಭಿವೃದ್ಧಿ ಎಂದು ಸರ್ಕಾರದ ವಿರುದ್ಧ ಕೈ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ.