ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವದರ ಮೂಲಕ ಮಾಜಿ ಸಚಿವ ತನ್ವೀರ್ ಸೇಠ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ಅವರ ಮೇಲೆ ನಡೆದ ಹಲ್ಲೆ ವಿಚಾರವಾಗಿ ಗೃಹ ಸಚಿವರಿಗೆ ಪತ್ರ ಬರೆದ ತನ್ವೀರ್ ಸೇಠ್, ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಅನ್ನೋದು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಸೂಕ್ತವಾಗಿ ತನಿಖೆ ನಡೆಯುತ್ತಿಲ್ಲ. ಈ ಪ್ರಕರಣದವನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ ಉದ್ದೇಶವನ್ನು ಪತ್ತೆ ಮಾಡಬೇಕು. ಇದರ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಿ ನನಗೆ ನ್ಯಾಯ ಒದಗಿಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಯಿಗೆ ತನ್ವೀರ್ ಸೇಠ್ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನು ಓದಿ: ತನ್ವೀರ್ ರೀತಿಯಲ್ಲೇ ಖಾದರ್ ಹತ್ಯೆಗೆ ಸಂಘಟನೆಯಿಂದ ಸ್ಕೆಚ್
ಕಳೆದ ವರ್ಷದ ನವೆಂಬರ್ 18ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ತನ್ವೀರ್ ಸೇಠ್ ಜೀವನ್ಮರಣ ಹೋರಾಟ ಆರಂಭಿಸಿದ್ದರು. ಹಲ್ಲೆಯ ನಂತರ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾದ ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆದಿದ್ದರು. ಬಳಿಕ ಭಾರತಕ್ಕೆ ವಾಪಸ್ ಬಂದಿದ್ದರು.
ಈ ಹಿಂದೆ ಈ ವಿಚಾರವಾಗಿ ಮಾತನಾಡಿದ್ದ ಅವರು, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಇದೆಲ್ಲವು ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಇದನ್ನು ಪೊಲೀಸರು ಜನರಿಗೆ ತಿಳಿಸಬೇಕು ಎಂದಿದ್ದರು.