ಮೈಸೂರು: ಸರ್ಕಾರಿ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ನಾಗವೇಣಿ (41) ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಪತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಪತ್ನಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ವೆಂಕಟಪ್ಪಗೆ 1997ರಲ್ಲಿ ನಾಗವೇಣಿಯನ್ನು ಮದುವೆ ಮಾಡಿಕೊಡಲಾಗಿತ್ತು. ನಾಗವೇಣಿ ಪತಿ ವೆಂಕಟಪ್ಪ, ಹುಣಸೂರು ತಾಲೂಕಿನಲ್ಲಿ ಸಹಾಯಕ ಶಿಶುಯೋಜನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಈ ದಂಪತಿ ವಾಸವಿದ್ದರು.
ಆದರೆ ಈಗ ನಾಗವೇಣಿ ಪೋಷಕರು, ಅಳಿಯ ವೆಂಕಟಪ್ಪ ಕೆಲ ತಿಂಗಳಿನಿಂದ ಕುಡಿದು ಬಂದು ಮಗಳಿಗೆ ಹೊಡೆದು ಕಿರುಕುಳ ಕೊಡುತ್ತಿದ್ದನು. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಈ ಬಗ್ಗೆ ನಮ್ಮ ಮಗಳು ನಮಗೆ ಹೇಳಿದ್ದಳು. ನಂತರ ನಾವು ಅಳಿಯನಿಗೆ ಬುದ್ಧಿವಾದ ಹೇಳಿದ್ದೆವು. ಆದರೆ ಆತ ನಮಗೆ ಅವಾಚ್ಯ ಪದದಿಂದ ಬೈದಿದ್ದನು. ಈಗ ಆತನೇ ಮಗಳಿಗೆ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.