ಬೆಂಗಳೂರು: ಕೊರೊನಾ ವೈರಸ್ ಶಂಕೆಯಿಂದ ದಾಖಲಾಗಿದ್ದ ನಾಲ್ವರ ವರದಿ ನೆಗೇಟಿವ್ ಬಂದಿದ್ದು, ಇದರಿಂದ ಸಿಲಿಕಾನ್ ಸಿಟಿ ಮಂದಿಗೆ ಇದ್ದ ಕೊರೊನಾ ಭಯ ಕೊಂಚ ದೂರವಾಗಿದೆ.
ಮಂಗಳವಾರ ಒಂದೇ ದಿನ ನಾಲ್ಕು ಜನರನ್ನು ಕೊರೊನಾ ಸೊಂಕು ತಗುಲಿರುವ ಲಕ್ಷಣಗಳು ಕಂಡ ಬಂದಿದ್ದು, ಬೆಂಗಳೂರಿನ ಜನರಿಗೆ ಆತಂಕ ಮೂಡಿಸಿತ್ತು. ಟೆಕ್ಕಿಯ ಸಂಪರ್ಕದಲ್ಲಿದ್ದ ರೂಂ ಮೇಟ್, ಟೆಕ್ಕಿಯ ಸಹದ್ಯೋಗಿ, ಸೌದಿಯಿಂದ ಹಾಗೂ ಜಪಾನ್ ನಿಂದ ಭಾರತಕ್ಕೆ ಹಿಂತಿರುಗಿ ಬಂದಿದ್ದ ವ್ಯಕ್ತಿಗಳಲ್ಲಿ ಕೊರೊನಾ ಸೊಂಕು ತಗುಲಿರುವ ಲಕ್ಷಣಗಳ ಮೇಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿತ್ತು.
ಜೊತೆಗೆ ಇರಾನ್ ಮೂಲದ ವಿದ್ಯಾರ್ಥಿಯನ್ನು ಸಹ ಕಳೆದ ನಾಲ್ಕು ದಿನದ ಹಿಂದೆ ದಾಖಲು ಮಾಡಿಕೊಂಡು ರಕ್ತ ಮತ್ತು ಕಫದ ಪರೀಕ್ಷೆ ಮಾಡಿಸಲಾಗಿತ್ತು. ಈತನ ತಾಯಿಗೆ ಕೊರೊನಾ ವೈರಸ್ ಪಾಸಿಟವ್ ಇದ್ದ ಹಿನ್ನೆಲೆಯಲ್ಲಿ ಈತನಿಗೂ ಕೊರೊನಾ ವೈರಸ್ ಸೊಂಕು ತಗುಲಿರುವ ಅನುಮಾನ ಹೆಚ್ಚಾಗಿತ್ತು.
ಸದ್ಯ ವಿದ್ಯಾರ್ಥಿಯ ವರದಿ ಎರಡು ದಿನಗಳ ಹಿಂದೆಯೇ ಬಂದಿದ್ದು ಕೊರೊನಾ ವೈರಸ್ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಮಂಗಳವಾರ ದಾಖಲು ಮಾಡಿಕೊಂಡಿದ್ದ ನಾಲ್ಕು ಜನರ ವರದಿ ಬಂದಿದ್ದು, ಯಾರಿಗೂ ಕೋವಿಂಡ್ 19 ವೈರಸ್ ಇಲ್ಲ ಎಂದು ದೃಢಪಟ್ಟಿದೆ. ಬುಧವಾರ ಮೂರು ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಉಳಿದ ಇಬ್ಬರನ್ನ ಇಂದು ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ ಎಂದು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ ನಿರ್ದೇಶಕರಾದ ಡಾ. ನಾಗರಾಜ್ ತಿಳಿಸಿದ್ದಾರೆ.
ಮಹಾಮಾರಿ ಕೊರೊನಾಗೆ ಇಡೀ ವಿಶ್ವವೇ ಆತಂಕದಲ್ಲಿದೆ. ಮಂಗಳವಾರವಷ್ಟೇ ಹೈದರಾಬಾದ್ ಮೂಲದ ಬೆಂಗಳೂರಿನ ಟೆಕ್ಕಿಗೆ ಕೊರೊನಾ ಇರೋದು ಪಕ್ಕವಾದ ಮೇಲೆ ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆಯಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರಿಗಾಗಿ ವಿಶೇಷ ಪ್ರತ್ಯೇಕ ವಾರ್ಡ್‍ಗಳನ್ನು ತೆರೆದು ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಸೊಂಕು ಇರುವ ಲಕ್ಷಣಗಳು ಕಂಡುಬಂದವರನ್ನು ದಾಖಲಿಸಿಕೊಂಡು ಚಿಕಿತ್ಸೆ ಕೊಡುವುದಕ್ಕೆ ವೈದ್ಯರ ತಂಡವನ್ನು ರೆಡಿ ಮಾಡಿಕೊಳ್ಳಲಾಗಿದೆ.