ಕಾರವಾರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕೊರೊನಾ ವೈರಸ್ ಭೀತಿ ಮತ್ಸ್ಯ ಪ್ರಿಯ ಕರಾವಳಿ ಜನರಲ್ಲಿಯೂ ಆತಂಕ ಮನೆ ಮಾಡಿದ್ದು, ಮಾಂಸಹಾರದ ಬೇಡಿಕೆ ಇಳಿಮುಖವಾಗಿದೆ. ಮೀನು, ಮಾಂಸವನ್ನು ಕೊಳ್ಳುವವರೇ ಇಲ್ಲದಂತಾಗಿದೆ.
ಕರಾವಳಿ ಮೀನುಪ್ರಿಯರಿಗೆ ಮೆಚ್ಚಿನ ತಾಣ. ಇಲ್ಲಿ ಸಿಗುವ ಮೀನುಗಳ ರುಚಿ ಸವಿದವರಿಗೇ ಗೊತ್ತು. ಇಲ್ಲಿನ ಮೀನುಗಳು ಕೇವಲ ರಾಜ್ಯಕ್ಕೆ ಮಾತ್ರವಲ್ಲದೇ ಹೊರ ರಾಜ್ಯ, ವಿದೇಶಕ್ಕೂ ರಫ್ತಾಗುತ್ತದೆ. ಆದರೆ ಕೊರೊನಾ ವೈರಸ್ ಜಲಚರ ಜೀವಿಗಳನ್ನು ಹಾಗೂ ಮಾಂಸಹಾರ ಮಾಡುವುದರಿಂದಾಗಿ ಹರಡುತ್ತದೆ ಎಂಬುದು ದೃಢಪಟ್ಟಿದೆ. ಭಾರತೀಯ ಆಹಾರ ಸಂರಕ್ಷಣಾ ಇಲಾಖೆ ಕರಾವಳಿ ಭಾಗದ ಮಾಂಸದ ಅಂಗಡಿಗಳಿಗೆ, ಮೀನಿನ ಹೋಟೆಲ್‍ಗಳಿಗೆ ಶುಚಿತ್ವ ಕಾಪಾಡುವಂತೆ ನೋಟಿಸ್ ನೀಡಿದೆ. ಇದರ ಜೊತೆಯಲ್ಲಿ ಜಿಲ್ಲಾ ಆಹಾರ ಇಲಾಖೆ ಸಹ ಮೀನುಗಳನ್ನು ಕುದಿಸಿದ ನೀರಲ್ಲಿ ಬೇಯಿಸಿ ಸೇವಿಸುವಂತೆ ಮಾಂಸಪ್ರಿಯರಿಗೆ ತಿಳಿಹೇಳುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಮಾಂಸದ ಅಂಗಡಿಗಳಿಗೆ, ಹೋಟಲ್‍ಗಳಿಗೆ ಜಾಗೃತಿ ಮೂಡಿಸುತ್ತಿದ್ದು ಜನ ಮಾಂಸ, ಮೀನು ಭಕ್ಷಿಸಲು ಭಯಪಡುತ್ತಿದ್ದಾರೆ.
ಕರಾವಳಿ ಭಾಗದಲ್ಲಿ ಆಹಾರ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಮಾಂಸಪ್ರಿಯರು ಸಸ್ಯಹಾರಿಗಳಾಗಿ ಬದಲಾಗಿದ್ದಾರೆ. ಪ್ರತಿ ದಿನ ಮೀನು, ಮಾಂಸ ತಿನ್ನುವವರು ಈಗ ಬಂದ್ ಮಾಡಿದ್ದಾರೆ. ಇದರ ಪರಿಣಾಮವೀಗ ಮೀನು ಮಾರುಕಟ್ಟೆಗಳ ಮೇಲೆ ಹಾಗೂ ಕೋಳಿ ಮಾಂಸದ ಮಾರುಕಟ್ಟೆಯ ಮೇಲೆ ಬಿದ್ದಿದೆ. ಮೀನುಗಳಿಗೆ ಉತ್ತಮ ದರವಿದ್ದರೂ ಮೀನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರಿಲ್ಲದೇ ದರ ಇಳಿಸುವಂತಾಗಿದ್ದು ಬಿಕೋ ಎನ್ನುತಿದ್ರೆ, ಕೋಳಿ ಮಾಂಸದ ಅಂಗಡಿಗಳಿಗೆ ಗ್ರಾಹಕರಿಲ್ಲದೆ ದರವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದ್ದು, ಗ್ರಾಹಕರಿಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಸದ್ಯ ಕರಾವಳಿ ಭಾಗದಲ್ಲಿ ಮೀನಿನ ದರ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಲೆಪ್ಪೆ-80 ರಿಂದ 50 ರೂ., ಚಟ್ಲೆ (ಸಿಗಡಿ)-180 ರಿಂದ 150ರೂ., ಪಾಂಪ್ಲೆಟ್-800 ರಿಂದ 600ರೂ., ಏಡಿ -120 ರಿಂದ 50ರೂ. ಇಳಿಕೆ ಕಂಡಿದೆ. ಆದರೆ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕೋಳಿ ಮಾಂಸ ಕೆಜಿ ಒಂದಕ್ಕೆ 200 ರೂ. ಇದ್ದಿದ್ದು ಕಳೆದ ಎರಡು ದಿನದಿಂದ 120 ರಿಂದ 159ರ ಒಳಗೆ ಇಳಿಮುಖವಾಗಿದೆ. ಕರಾವಳಿ ಭಾಗದ ಮಾಂಸ ಪ್ರಿಯರಿಗೆ ಕೊರೊನಾ ಭೀತಿ ಮಾಂಸಹಾರಕ್ಕೆ ಬ್ರೇಕ್ ಹಾಕಿದ್ದು ಸಸ್ಯಹಾರಿಗಳನ್ನಾಗಿ ಬದಲಿಸಿದೆ.