ನಾಳೆಯಿಂದ ದ್ವಿತೀಯ ಪಿಯುಸಿ ಎಕ್ಸಾಂ ಪ್ರಾರಂಭ – ಪರೀಕ್ಷೆಗೆ ಟಿಪ್ಸ್

Public TV
3 Min Read
exam puc

– ಬಿಗಿ ಭದ್ರತೆಯ ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ
– ಈ ಬಾರಿ 40 ಪುಟಗಳ ಉತ್ತರ ಪತ್ರಿಕೆ

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರದಿಂದ ಪ್ರಾರಂಭವಾಗಲಿದೆ. ಪರೀಕ್ಷೆಗೆ ಪಿಯು ಬೋರ್ಡ್ ಸಕಲ ಸಿದ್ಧತೆ ಮುಗಿಸಿದ್ದು, ಪರೀಕ್ಷೆಗೆ ಸ್ಕ್ವಾಡ್‍ನ ಹದ್ದಿನ ಕಣ್ಣಿಡಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮುಕ್ತಾಯ ಮಾಡಿದ್ದು, ನಾಳೆಯಿಂದ ಮಾರ್ಚ್ 23ರವರೆಗೆ ಪರೀಕ್ಷೆಗಳು ನಡೆಯಲಿದೆ. ಮೊದಲ ದಿನವಾದ ನಾಳೆ ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ ವಿಷಯದ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದರೆ ಬಸ್‍ಗಳಲ್ಲಿ ಉಚಿತ ಸಂಚಾರ ಸಿಗಲಿದೆ.

puc board

ಈ ಬಾರಿ ಒಟ್ಟು 6 ಲಕ್ಷದ 80 ಸಾವಿರದ 49 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 3 ಲಕ್ಷದ 38 ಸಾವಿರದ 431 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 41 ಸಾವಿರದ 618 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 1016 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳಿಗೆ ಬಿಗಿ ಭದ್ರತೆ ಮಾಡಲಾಗಿದ್ದು, ಅಕ್ರಮ ನಡೆಯದಂತೆ ಕ್ರಮವಹಿಸಲಾಗಿದೆ. ಅಕ್ರಮ ತಡೆಗೆ ಸ್ಕ್ವಾಡ್‍ಗಳನ್ನ ನೇಮಿಸಲಾಗಿದೆ. ಎಲ್ಲಾ ಕೇಂದ್ರಗಳಿಗೂ ಸಿಸಿಟಿವಿ ಹಾಕಿ ಹದ್ದಿನ ಕಣ್ಣು ಇಡಲಾಗಿದೆ. ಪ್ರತಿ ಕೇಂದ್ರಗಳಿಗೆ ಸಿಟ್ಟಿಂಗ್ ಸ್ಕ್ಯಾಡ್, ಫ್ಲೈಯಿಂಗ್ ಸ್ಕ್ಯಾಡ್ ನೇಮಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಕ್ಯಾಡ್ ಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

CCTV

ಪರೀಕ್ಷಾ ಸಮಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮವಹಿಸಲಾಗಿದೆ. ಪ್ರಶ್ನೆ ಪತ್ರಿಕೆ ಕೊಠಡಿಗೆ 247 ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಸ್ಮಾರ್ಟ್ ಫೋನ್, ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ನಿಷೇಧ ಮಾಡಲಾಗಿದೆ. ಪರೀಕ್ಷಾ ಅಕ್ರಮದಲ್ಲಿ ತೊಡಗಿದರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಇಲಾಖೆ ನಿರ್ಧಾರ ಮಾಡಿದ್ದು, ಅಕ್ರಮ ಸಾಬೀತಾದರೆ 5 ಲಕ್ಷ ದಂಡ ಮತ್ತು ಜೈಲುವಾಸ ಶಿಕ್ಷೆ ಅನುಭವಿಸಬೇಕಾಗುತ್ತೆ.

ಇದೇ ಮೊದಲ ಬಾರಿಗೆ ಎಲ್ಲಾ ಡಿಸಿ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳನ್ನ ಮಾನಿಟರಿಂಗ್ ಮಾಡುವ ವ್ಯವಸ್ಥೆಯನ್ನ ಜಾರಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಉತ್ತರ ಬರೆಯಲು 40 ಪುಟಗಳ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಅಲ್ಲದೆ ಪರೀಕ್ಷೆ ಮುಗಿದ ಬಳಿಕ ಹಾಜರಾತಿ, ವಿದ್ಯಾರ್ಥಿಗಳ ವಿವರ ಎಲ್ಲವನ್ನು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

exam copy e1579574890445

ಪರೀಕ್ಷೆಗೆ ಟಿಪ್ಸ್
* ಯಾವುದೇ ಗಾಳಿ ಸುದ್ದಿಗಳಿಗೆ, ಸುಳ್ಳು ಸುದ್ದಿಗಳಿಗೆ ವಿದ್ಯಾರ್ಥಿಗಳು ತಲೆಕೊಡದೇ ನಿರಾತಂಕವಾಗಿ ಪರೀಕ್ಷೆ ಬರೆಯಿರಿ.
* ಪರೀಕ್ಷಾ ಹಿಂದಿನ ದಿನ ರಾತ್ರಿ ಹೆಚ್ಚು ನಿದ್ರೆ ಕೆಡಬೇಡಿ.
* ಪಾಯಿಂಟ್ಸ್ ಗಳ ರೂಪದಲ್ಲಿ ಪಠ್ಯವನ್ನ ಮನಸ್ಸಿನಲ್ಲಿ ಓದಿಕೊಳ್ಳಿ.
* ಪರೀಕ್ಷಾ ಹಿಂದಿನ ದಿನವೇ ಹಾಲ್ ಟಿಕೆಟ್, ಪೆನ್ನು ಇನ್ನಿತರ ಸಾಮಗ್ರಿಗಳನ್ನ ರೆಡಿ ಮಾಡಿಕೊಳ್ಳಿ.
* ಪರೀಕ್ಷಾ ಕೇಂದ್ರಕ್ಕೆ ಅರ್ಧಗಂಟೆ ಮುಂಚಿತವಾಗಿಯೇ ಹೋಗಿ ನಿಮ್ಮ ಪರೀಕ್ಷಾ ಕೇಂದ್ರವನ್ನ ಖಚಿತ ಪಡಿಸಿಕೊಳ್ಳಿ.
* ಪ್ರಶ್ನೆ ಪತ್ರಿಕೆಯನ್ನ ಮೊದಲು 15 ನಿಮಿಷ ಆರಾಮವಾಗಿ ಓದಿ ಅರ್ಥ ಮಾಡಿಕೊಳ್ಳಿ.
* ಮೊದಲು ಸ್ಪಷ್ಟವಾಗಿ ಗೊತ್ತಿರುವ ಉತ್ತರಗಳನ್ನ ಬರೆಯಿರಿ. ಪ್ರತೀ ಪ್ರಶ್ನೆಗೆ ಇಂತಿಷ್ಟೆ ಅವಧಿಯಲ್ಲಿ ಉತ್ತರ ನೀಡುವ ಪ್ಲಾನ್ ಮಾಡಿಕೊಳ್ಳಿ.
* ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಮೇಲೆ ಮತ್ತೊಮ್ಮೆ ಸಂಪೂರ್ಣವಾಗಿ ಗಮನಿಸಿ ಉತ್ತರ ಪತ್ರಿಕೆಯನ್ನ ನೀಡಿ.

CA 2019 exams postponed 735x389 1

ಪ್ರಶ್ನೆ ಪತ್ರಿಕೆ ಲೀಕ್ ಆಗದಂತೆ ತಡೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಕಾಗಿದೆ. ಗೃಹ ಇಲಾಖೆ ಮತ್ತು ಪಿಯುಸಿ ಬೋರ್ಡ್, ಪ್ರತಿ ಜಿಲ್ಲೆಗಳ ಡಿಸಿಗಳು ಭದ್ರತೆಯ ನೇತೃತ್ವವಹಿಸಿದೆ. ಒಂದು ವೇಳೆ ಪೇಪರ್ ಲೀಕ್ ಸುದ್ದಿ ತಿಳಿದರೆ ವಿದ್ಯಾರ್ಥಿಗಳು ಸ್ಥಳೀಯ ಪೋಲೀಸ್ ಠಾಣೆ ಅಥವಾ ಪಿಯುಸಿ ಬೋರ್ಡ್ ಸುದ್ದಿ ತಿಳಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *