ಕರಿದ ಅನುಪಯುಕ್ತ ಎಣ್ಣೆಯಿಂದ ಡೀಸೆಲ್ ತಯಾರಿ – ನೈಕುಳಿ, ಹೊನ್ನೆಯಲ್ಲಿ ಸಿಗುತ್ತೆ ಡೀಸೆಲ್

Public TV
2 Min Read
udp public hero

– ಉಡುಪಿಯ ಡಾ. ಸಂತೋಷ್ ಪೂಜಾರಿ ನಮ್ಮ ಪಬ್ಲಿಕ್ ಹೀರೋ

ಉಡುಪಿ: ಇಂದಲ್ಲ ನಾಳೆ ಪೆಟ್ರೋಲ್ ನಿಕ್ಷೇಪಗಳು ಬರಿದಾಗೋದ್ರಲ್ಲಿ ಡೌಟೇ ಇಲ್ಲ. ಕಚ್ಚಾತೈಲ, ಅನಿಲಗಳ ಬೆಲೆ ದಿನೇ ದಿನೇ ಗಗನಕ್ಕೆ ಚಿಮ್ಮುತ್ತಿದೆ. ನಮ್ಮ ದಾರಿಯನ್ನು ನಾವು ನೋಡಿಕೊಳ್ಳದಿದ್ದರೆ ಕಾಲ ಕಷ್ಟ ಇದೆ. ಈ ನಡುವೆ ಉಡುಪಿಯ ಯುವ ವಿಜ್ಞಾನಿ ಕರಿದ ಎಣ್ಣೆಯಲ್ಲಿ, ಕಾಡಿನಲ್ಲಿ ಸಿಗೋ ಬೀಜಗಳಲ್ಲಿ ಡೀಸೆಲ್ ತಯಾರು ಮಾಡಿದ್ದಾರೆ. ಜೈವಿಕ ಇಂಧನ ಕಂಡು ಹುಡುಕುವ ಮೂಲಕ ದೇಶಕ್ಕೆ ಆಶಾಕಿರಣರಾಗಿದ್ದಾರೆ.

ಡಾ. ಸಂತೋಷ್ ಪೂಜಾರಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯವರಾಗಿದ್ದು, ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಕರಿದ ಅನುಪಯುಕ್ತ ಎಣ್ಣೆಯನ್ನು ಸಂಗ್ರಹ ಮಾಡಿ ಅದರಿಂದ ಡೀಸೆಲ್ ತಯಾರು ಮಾಡಿದ್ದಾರೆ. ಅಲ್ಲದೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಿಂದ ಜೈವಿಕ ಇಂಧನಗಳ ಕುರಿತಂತೆ ಸಂಶೋಧನೆ ಮಾಡುತ್ತಿರುವ ಡಾ. ಸಂತೋಷ್ ಪೂಜಾರಿ ಕರಿದ ಎಣ್ಣೆ, ನೈಕುಳಿ ಬೀಜ, ಹೊನ್ನೆ ಬೀಜ ಮತ್ತು ರಬ್ಬರ್ ಬೀಜಗಳ ಎಣ್ಣೆ ಹಿಂಡಿ ತೆಗೆದು ಡೀಸೆಲ್ ಕಂಡು ಹಿಡಿದಿದ್ದಾರೆ.

udp public hero 1 3

ಕಡು ಬಡತನದಿಂದ ಬಂದಿರುವ ಸಂತೋಷ್‍ಗೆ ನಿಟ್ಟೆ ಎಜುಕೇಶನ್ ಟ್ರಸ್ಟ್ ಸಂಪೂರ್ಣ ಶಿಕ್ಷಣ ಕೊಟ್ಟಿದೆ. ಜೀವಶಾಸ್ತ್ರ ವಿಷಯದ ಮೇಲೆ ಅಧ್ಯಯನ ಮಾಡಿರುವ ಸಂತೋಷ್ ಪೂಜಾರಿ ಬಯೋಲಜಿ ಫಾರ್ ಎಂಜಿನಿಯರ್ಸ್ ಭೋದನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಜೈವಿಕ ಇಂಧನ ಅಭಿವೃದ್ಧಿ ಕೇಂದ್ರವನ್ನು ಮುನ್ನಡೆಸುತ್ತಿರುವ ಸಂತೋಷ್ ಈಗಾಗಲೇ 15 ಸಾವಿರ ಲೀಟರ್ ಜೈವಿಕ ಡೀಸೆಲ್ ತಯಾರು ಮಾಡಿದ್ದಾರೆ. ಕಾಲೇಜಿನ ವಾಹನಗಳು, ಬಸ್ಸುಗಳಿಗೆ ಬಳಸುತ್ತಿದ್ದಾರೆ. ಪಂಪ್‍ನಲ್ಲಿ ಸಿಗುವ ಡೀಸೆಲ್ ರೇಟ್‍ಗಿಂತ 10 ರೂ. ಕಡಿಮೆ ದರದಲ್ಲಿ ಜೈವಿಕ ಡೀಸೆಲ್ ಸೇಲ್ ಮಾಡುತ್ತಿದ್ದಾರೆ.

udp public hero 1 1

ಕಂಪ್ರೆಷನ್ ಇಗ್ನೀಷಿಯನ್ ಇಂಜಿನ್ ಪರ್ಫಾಮೆನ್ಸ್ ಸ್ಟಡೀಸ್ ವಿದ್ ಡಿಫರೆಂಟ್ ಬ್ಲೆಂಡ್ಸ್ ಆಫ್ ಬಯೋ ಡೀಸೆಲ್ ಪ್ರೊಡ್ಯೂಸ್ಡ್ ಫ್ರಂ ನೋವೆಲ್ ಸೋರ್ಸಸ್ ವಿಷಯ ಮಂಡನೆಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಂತೋಷ್‍ಗೆ ಡಾಕ್ಟರೇಟ್ ಪದವಿ ನೀಡಿದೆ. ಅಮೆರಿಕದ ಜೈವಿಕ ಇಂಧನ ಮಂಡಳಿಯ ಕಾರ್ಯಾಗಾರದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಸಂತೋಷ್ ಪಾಲ್ಗೊಂಡಿದ್ದು ಮತ್ತೊಂದು ಹೆಮ್ಮೆ. ಅಮೆರಿಕ ನೆಕ್ಸ್ಟ್ ಜನರೇಶನ್ ಸೈಂಟಿಸ್ಟ್ ಫಾರ್ ಬಯೋ ಡೀಸೆಲ್ ಎಂಬ ಬಿರುದು ಇವರಿಗೆ ನೀಡಿದೆ.

udp public hero 1 2

ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ. ಸಂತೋಷ್ ಪೂಜಾರಿ ಪ್ರಾಜೆಕ್ಟ್ ಕೊಟ್ಟಿದ್ದಾರೆ. ವಿವಿಧ ಮರಗಳ ಸೊಪ್ಪು, ತೊಗಟೆ, ಬೇರುಗಳಿಂದ ಸೌಂದರ್ಯವರ್ಧಕ ಮತ್ತು ಔಷಧಿ ತಯಾರಿ ಸಂಶೋಧನೆ ನಡೆಸುತ್ತಿದ್ದಾರೆ. ದಿನಪೂರ್ತಿ ಇಂಜಿನಿಯರಿಂಗ್ ಟೀಚಿಂಗ್ ಮಾಡುವ ಸಂತೋಷ್ ಸಂಜೆ- ಬೆಳಗ್ಗೆ ಡೀಸೆಲ್ ಸಂಶೋಧನೆಯ ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *