ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಮತ್ತೆ ನೇಣು ಕುಣಿಕೆಯಿಂದ ಪಾರಾಗಿದ್ದಾರೆ. ಮುಂದಿನ ಆದೇಶದವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ದೆಹಲಿಯ ಪಟಿಯಾಲ ಕೋರ್ಟ್ ಆದೇಶ ನೀಡಿದೆ.
ಸುಪ್ರೀಂಕೋರ್ಟಿನಲ್ಲಿ ಗಲ್ಲು ಶಿಕ್ಷೆಯನ್ನು ಮರಣದಂಡನೆ ಇಳಿಸುವಂತೆ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿ ವಜಾ ಆಗುತ್ತಿದ್ದಂತೆ, ತಿರಸ್ಕೃತಗೊಂಡಿರುವ ಕ್ಷಮಾದಾನ ಅರ್ಜಿಯನ್ನು ಮರು ಪರಿಶೀಲನೆ ನಡೆಸುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದ ಹಿನ್ನೆಲೆ ನಾಳೆ ಬೆಳಗ್ಗೆ ನಿಗದಿಯಾಗಿದ್ದ ಗಲ್ಲು ಶಿಕ್ಷಗೆ ತಡೆ ನೀಡುವಂತೆ ಪವನ್ ಗುಪ್ತಾ ಪರ ವಕೀಲ ಎ.ಪಿ ಸಿಂಗ್ ಮನವಿ ಮಾಡಿದರು. ಇದರ ಜೊತೆಗೆ ಮತ್ತೋರ್ವ ದೋಷಿ ಅಕ್ಷಯ್ ಠಾಕೂರ್ ನ ತಿರಸ್ಕೃತಗೊಂಡ ಕ್ಷಮಾದಾನ ಅರ್ಜಿಯ ಮರು ಪರಿಶೀಲನಾ ಅರ್ಜಿ ಬಾಕಿ ಇದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಧರ್ಮೇಂದರ್ ರಾಣಾ ಅರ್ಜಿದಾರರ ಪರ ವಕೀಲ ಎ.ಪಿ ಸಿಂಗ್ ವಿರುದ್ಧ ಹರಿಹಾಯ್ದರು. ಒಂದು ವಾರದಲ್ಲಿ ಕಾನೂನು ಹೋರಾಟವನ್ನು ಮುಗಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದ್ಯಾಗೂ ನೀವೂ ಕಾನೂನು ಹೋರಾಟಗಳನ್ನು ಅಂತ್ಯಗೊಳಿಸಿಲ್ಲ ನೀವೂ ಬೆಂಕಿಯ ಜೊತೆ ಆಟವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ಗಂಟೆಗೆ ವಿಚಾರಣೆ ನಡೆಸಿದ್ದ ಪಟಿಯಾಲ ಕೋರ್ಟ್ ದಿಢೀರ್ ಬೆಳವಣಿಗೆಯಿಂದ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದ್ದು, ಮುಂದಿನ ಆದೇಶವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ತಿಹಾರ್ ಜೈಲು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಸತತವಾಗಿ ಮೂರನೇ ಬಾರಿ ಗಲ್ಲು ಶಿಕ್ಷೆಯಿಂದ ನಾಲ್ವರು ದೋಷಿಗಳು ಪಾರಾಗಿದ್ದಾರೆ.
ಪಟಿಯಾಲ ಕೋರ್ಟ್ ತೀರ್ಪು ಬಳಿಕ ಮಾತನಾಡಿದ ದೋಷಿಗಳ ಪರ ವಕೀಲ ಎ.ಪಿ ಸಿಂಗ್, ನಾಳಿನ ಗಲ್ಲು ಶಿಕ್ಷೆಗೆ ವಿಶೇಷ ಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದವರೆಗೂ ತಡೆ ನೀಡಿದೆ. ನಾಲ್ವರು ದೋಷಿಗಳಿಗೂ ನಾಳೆ ಶಿಕ್ಷೆ ಆಗುವುದಿಲ್ಲ ಎಂದರು.
ಕೋರ್ಟ್ ಆದೇಶ ಬಗ್ಗೆ ನಾನೇನು ಹೇಳಲಿ, ಪದೇ ಪದೇ ಗಲ್ಲು ಶಿಕ್ಷೆ ಮುಂದೂಡಿಕೆಯಾಗಿದೆ ಭಾರತದಲ್ಲಿ ಅಪರಾಧಿಗಳಿಗೆ ಬೆಂಬಲ ಸಿಗುತ್ತಿದೆ. ಇಡೀ ಸಮಾಜ ಈ ಬೆಳವಣಿಗೆ ನೋಡುತ್ತಿದೆ. ಗಲ್ಲು ಶಿಕ್ಷೆ ಯಾವಾಗ ಎಂದು ನೀವೇ ಕೋರ್ಟ್ ಮತ್ತು ಸರ್ಕಾರವನ್ನು ಕೇಳಿ ಎಂದು ಸಂತ್ರಸ್ತೆ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದರು.