ಸದನ ನುಂಗಿದ ದೊರೆಸ್ವಾಮಿ ಕುರಿತ ಯತ್ನಾಳ್ ಹೇಳಿಕೆ

Public TV
3 Min Read
VIDHANASABHE

– ಅಧಿವೇಶನದಿಂದ ಬಹಿಷ್ಕಾರಕ್ಕೆ ಕೈ, ಜೆಡಿಎಸ್ ಪಟ್ಟು

ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನವೇ ವಿಧಾನಸಭೆ ಕಲಾಪದಲ್ಲಿ ಗದ್ದಲ-ಕೋಲಾಹಲ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಕುರಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕಲಾಪದಲ್ಲಿ ತೀವ್ರ ಮಾತಿನ ಚಕಮಕಿ, ಧರಣಿಗೆ ವೇದಿಕೆ ಒದಗಿಸಿಕೊಟ್ಟಿತ್ತು.

ಗದ್ದಲಕ್ಕೆ ಇಡೀ ದಿನದ ಕಲಾಪವೇ ಬಲಿಯಾಯ್ತು. ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯ ಬಳಿಕ ಸದನದಲ್ಲಿ ಶಾಸಕ ಬಸನಗೌಡ ಯತ್ನಾಳ್ ಅವರು ದೊರೆಸ್ವಾಮಿಯವರಿಗೆ ಅವಹೇಳನ ಮಾಡಿದ್ದಾರೆ. ಈ ಕುರಿತು ಚರ್ಚೆಗೆ ಅವಕಾಶ ಕೊಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ತಸ್ತಾವನೆ ಸಲ್ಲಿಕೆಗೆ ಮುಂದಾದರು.

BUDGET SESSION

ಸ್ಪೀಕರ್‍ಗೆ ನಿಯಮ 363ರಡಿ ವಿವೇಚನಾಧಿಕಾರ ಬಳಸಿ ಚರ್ಚೆಗೆ ಅವಕಾಶ ಕೊಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು. ಸಿದ್ದರಾಮಯ್ಯ ಒತ್ತಾಯಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಶುರು ಮಾಡಿದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರೂ ವಾಕ್ಸಮರ ನಡೆಸಿದರು. ಸಿದ್ದರಾಮಯ್ಯ ಮನವಿಗೆ ಸ್ಪೀಕರ್ ಒಪ್ಪದಿದ್ದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಸ್ವಾತಂತ್ರ್ಯ ಹೋರಾಟಗಾರರನ್ನ ಯತ್ನಾಳ್ ಅವಮಾನಿಸಿದ್ದು ಸರಿಯಲ್ಲ. ಅವರನ್ನ ಉಚ್ಛಾಟಿಸಬೇಕು ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ವೇಳೆ ಒತ್ತಾಯಿಸಿದರು. ಧಿಕ್ಕಾರ ಧಿಕ್ಕಾರ ಸರ್ಕಾರಕ್ಕೆ ಧಿಕ್ಕಾರ ಅಂತ ಕೈ ಸದಸ್ಯರು ಜೋರು ಘೋಷಣೆ ಮಾಡಿದರು. ಕಾಂಗ್ರೆಸ್ ಸದಸ್ಯರಿಗೆ ಜೆಡಿಎಸ್ ಸದಸ್ಯರೂ ಪ್ರತಿಭಟನೆಗೆ ಸಾಥ್ ನೀಡಿದ್ರು. ಧರಣಿ ಕೈಬಿಡುವಂತೆ ಸ್ಪೀಕರ್ ಮಾಡಿದ ಮನವಿಗೆ ಧರಣಿನಿರತರು ಒಪ್ಪಲಿಲ್ಲ. ಪರಿಣಾಮ ಸ್ಪೀಕರ್ ಕಾಗೇರಿ ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.

BUDGET 1

ಮಧ್ಯಾಹ್ನ ಸ್ಪೀಕರ್ ಕಾಗೇರಿ ಪ್ರತಿಪಕ್ಷ ನಾಯಕರ ಜೊತೆ ಸಂಧಾನ ಸಭೆ ನಡೆಸಿದರು. ಧರಣಿ ಕೈ ಬಿಡುವಂತೆ ಸ್ಪೀಕರ್ ಮಾಡಿಕೊಂಡ ಮನವಿಗೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಒಪ್ಪದೇ ಯತ್ನಾಳ್ ಹೇಳಿಕೆ ಕುರಿತು ಚರ್ಚೆ ಮತ್ತು ಯತ್ನಾಳ್ ಅವರ ಬಹಿಷ್ಕಾರಕ್ಕೆ ಪಟ್ಟು ಹಿಡಿದರು. ಈ ಕುರಿತು ಆಡಳಿತ ಪಕ್ಷದ ಸದಸ್ಯರ ಜೊತೆ ಚರ್ಚಿಸೋದಾಗಿ ಹೇಳಿ ಸ್ಪೀಕರ್ ಸಭೆ ಮುಗಿಸಿದ್ರು. ಬಳಿಕ ಸ್ಪೀಕರ್ ಸಿಎಂ ಯಡಿಯೂರಪ್ಪ ಸೇರಿ ಹಲವರ ಜೊತೆ ಚರ್ಚಿಸಿದರು. ನಂತರ ಮತ್ತೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದರು. ಆದರೆ ಈ ಸಂಧಾನ ಸಭೆಯೂ ವಿಫಲವಾಯ್ತು. ಸದನದಲ್ಲಿ ಹೋರಾಟಕ್ಕೆ ಕಾಂಗ್ರೆಸ್ ನಿರ್ಧರಿಸಿತು.

BUDGET 6

ಮಧ್ಯಾಹ್ನದ ಕಲಾಪ ಒಂದು ಗಂಟೆ ವಿಳಂಬವಾಗಿ 4ಕ್ಕೆ ಶುರುವಾಯ್ತು. ಮಧ್ಯಾಹ್ನದ ಕಲಾಪದಲ್ಲೂ ಕಾಂಗ್ರೆಸ್ ಸದನದ ಬಾವಿಗಿಳಿದು ಧರಣಿ ನಡೆಸಿದರು. ಆದರೆ ಈ ಧರಣಿಗೆ ಜೆಡಿಎಸ್ ಸದಸ್ಯರು ಸಾಥ್ ಕೊಡದೇ ತಮ್ಮ ಜಾಗಗಳಲ್ಲೇ ಕೂತಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಸ್ಪೀಕರ್ ಕಾಗೇರಿ ಚರ್ಚೆಗೆ ಕೋರಿದ ಸಿದ್ದರಾಮಯ್ಯ ಅವರ ಮನವಿಯನ್ನು ತಿರಸ್ಕರಿಸಿದರು. ತಮ್ಮ ವಿವೇಚನಾಧಿಕಾರದಲ್ಲಿ ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ಕೊಡುವುದು ಅಸಾಧ್ಯ. ಹಾಗಾಗಿ ನಿಯಮ 307 ರ ಅನ್ವಯ ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಲಿಖಿತ ನೊಟೀಸ್ ಕೊಟ್ಟರೆ ಚರ್ಚೆಗೆ ಅವಕಾಶ ಕೊಡುವುದಾಗಿ ಕಾಂಗ್ರೆಸ್ಸಿಗೆ ಸ್ಪೀಕರ್ ತಿಳಿಸಿದರು. ಸ್ಪೀಕರ್ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಸದನದಲ್ಲಿ ಧರಣಿ ಮುಂದುವರಿಸಿತು. ಈ ವೇಳೆ ಸಿಎಂ ಯಡಿಯೂರಪ್ಪ ಮಾಡಿಕೊಂಡ ಮನವಿಗೂ ಕಾಂಗ್ರೆಸ್ ಒಪ್ಪಲಿಲ್ಲ. ಈ ಮಧ್ಯೆ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಸದನದಲ್ಲಿ ಜೋರಾಗಿ ಧಿಕ್ಕಾರ ಕೂಗಲಾರಂಭಿಸಿದರು.

BUDGET 8

ಇದೇ ವೇಳೆ ಎದ್ದು ನಿಂತ ಸಚಿವ ಈಶ್ವರಪ್ಪ, ಮೋದಿಯವರು ಕೊಲೆಗಡುಕರು ಅಂತ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದರು. ಹಾಗಾಗಿ ಸಿದ್ದರಾಮಯ್ಯರನ್ನು ಈ ಸದನದಿಂದ ಸಸ್ಪೆಂಡ್ ಮಾಡಿ ಎಂದು ಎರಡು ಸಲ ಕೂಗಿ ಹೇಳಿದರು. ಇಷ್ಟೆಲ್ಲ ಗದ್ದಲ, ಕೋಲಾಹಲದ ಮಧ್ಯೆಯೇ ಎಂಟು ವಿಧೇಯಕಗಳನ್ನು ಮಂಡಿಸಿ ಸರ್ಕಾರ ಚರ್ಚೆಯಿಲ್ಲದೇ ಅವುಗಳಿಗೆ ಅಂಗೀಕಾರವನ್ನೂ ಪಡೆದುಕೊಂಡಿತು. ಕಾಂಗ್ರೆಸ್ ಧರಣಿ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು ನಾಳೆಗೆ ಮುಂದೂಡಬೇಕಾಯ್ತು.

Share This Article
Leave a Comment

Leave a Reply

Your email address will not be published. Required fields are marked *