ದೆಹಲಿ, ತೆಲಂಗಾಣದಲ್ಲಿ ಮತ್ತೆರಡು ಕೊರೊನಾ ಪ್ರಕರಣ ಪತ್ತೆ

Public TV
2 Min Read
coronavirus 3 e1584274388916

– ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
– 70 ದೇಶಕ್ಕೆ ಹಬ್ಬಿದ ವೈರಸ್

ನವದೆಹಲಿ: ಪ್ರಪಂಚವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಕೇರಳದಲ್ಲಿ ಮೂವರಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ದೆಹಲಿ ಹಾಗೂ ತೆಲಂಗಾಣದ ಇಬ್ಬರಲ್ಲಿ ಪತ್ತೆಯಾಗಿದೆ. ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಎಚ್ಚರಿಕೆಯಿಂದ ನಿಭಾಯಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಸಚಿವಾಲಯ, ಕೊರೊನಾ ವೈರಸ್ ತಗುಲಿದ ಒಬ್ಬ ವ್ಯಕ್ತಿಯನ್ನು ದೆಹಲಿಯಲ್ಲಿ ಹಾಗೂ ಇನ್ನೊಬ್ಬರನ್ನು ತೆಲಂಗಾಣದಲ್ಲಿ ಗುರುತಿಸಲಾಗಿದೆ. ದೆಹಲಿಯಲ್ಲಿ ವೈರಸ್ ಪತ್ತೆಯಾದ ವ್ಯಕ್ತಿ ಇಟಲಿಗೆ ಪ್ರಯಾಣ ಬೆಳೆಸಿದ್ದರು ಹಾಗೂ ತೆಲಂಗಾಣದ ರೋಗಿ ದುಬೈಗೆ ಭೇಟಿ ನೀಡಿದ್ದರು. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಕಂಡುಬಂದಿರುವುದು ಖಚಿತವಾಗಿತ್ತು. ಇವರು ವುಹಾನ್‍ನಿಂದ ಬಂದವರಾಗಿದ್ದರು. ಈಗಾಗಲೇ ಈ ವೈರಸ್‍ನಿಂದಾಗಿ ಚೀನಾದಲ್ಲಿ 3 ಸಾವಿರ ಜನ ಮೃತಪಟ್ಟಿದ್ದು, ಇದೀಗ ಭಾರತಕ್ಕೂ ಕಾಲಿಡುತ್ತಿದೆ.

ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಇರುವುದು ಕಂಡುಬಂದ ನಂತರ ಕೇರಳ ಸರ್ಕಾರವು ಇದನ್ನು ರಾಜ್ಯ ವಿಪತ್ತು ಎಂದು ಘೋಷಿಸಿತ್ತು. ನಂತರ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆ ಆದೇಶವನ್ನು ಹಿಂಪಡೆದಿತ್ತು.

Corona Virus

ಈ ಕುರಿತು ಕೇಂದ್ರ ಸರ್ಕಾರ ಸಹ ಎಚ್ಚರಿಕೆ ವಹಿಸಿದ್ದು, ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಕೊರೊನಾ ವೈರಸ್ ದೇಶದಲ್ಲಿ ವೇಗವಾಗಿ ಹಬ್ಬಿಲ್ಲ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಬೋಲಾ, ನಿಫಾ, ಸ್ವಿನ್ ಫ್ಲೂ ವೈರಸ್ ಹಬ್ಬಿದಾಗ ಸಹ ತಜ್ಞ ವೈದ್ಯರು ಕಾರ್ಯ ನಿರ್ವಹಿಸಿ, ಪರಿಸ್ಥಿತಿ ನಿಭಾಯಿಸಿದ್ದರು ಎಂದು ತಿಳಿಸಿದ್ದಾರೆ.

ಪ್ರಪಂಚದಾದ್ಯಂತ 89 ಸಾವಿರ ಜರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ 2,912 ಸೇರಿದಂತೆ ಒಟ್ಟು ಮೂರು ಸಾವಿರ ಜನ ಸಾವನ್ನಪ್ಪಿದ್ದಾರೆ. ಡಿಸೆಂಬರ್‍ನಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದ್ದು, ಇದೀಗ ಸುಮಾರು 70ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿದೆ.

corona virus 3

ಕೊರೊನಾ ವೈರಸ್ ತಡೆಯಲು ಎಲ್ಲ ದೇಶಗಳು ಕ್ರಮ ಕೈಗೊಂಡಿದ್ದು, ಭಾರತವೂ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ದೇಶದ ಎಲ್ಲ 21 ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಿಗೂ ಸಹ ಈ ಕುರಿತು ಎಚ್ಚರಿಕೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *