ತಿಪ್ಪಾರೆಡ್ಡಿ ಬೆಂಬಲಿಗರಿಂದ ಸರ್ಕಾರದ ಹಣ ನುಂಗಲು ಸ್ಕೆಚ್- ರೈತ ಮಹಿಳೆ ಕಣ್ಣೀರು

Public TV
2 Min Read
CTD 10

ಚಿತ್ರದುರ್ಗ: ಚಿತ್ರದುರ್ಗ ಅಂದರೆ ಬರದನಾಡು. ಮಳೆ ಅನ್ನೋದು ತುಂಬಾ ಅಪರೂಪ. ಹೀಗಾಗಿ ನಾಲ್ಕೈದು ವರ್ಷಗಳಿಂದ ಬಿತ್ತನೆ ಮಾಡದೇ ಬಿಟ್ಟಿದ್ದ ಜಮೀನಿನಲ್ಲಿ ಸರ್ಕಾರದ ಹಣ ನುಂಗಲು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಬೆಂಬಲಿಗರು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಕೆಚ್ ಹಾಕಿದ್ದಾರೆ. ಜಮೀನಿನ ರೈತರ ಅನುಮತಿಯಿಲ್ಲದೇ ದೌರ್ಜನ್ಯದಿಂದ ನಿರುಪಯುಕ್ತ ಚೆಕ್‍ಡ್ಯಾಂ ನಿರ್ಮಾಣಕ್ಕೆ ಮುಂದಾಗಿದ್ದಾರೆಂಬ ಆರೋಪವೊಂದು ಕೇಳಿಬಂದಿದೆ.

CTD 6

ಕೋಟೆನಾಡು ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಗ್ರಾಮದ ಜಯ್ಯಮ್ಮ ಎಂಬವರ ಜಮೀನು ಇಂಗಳದಾಳ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಿಂದ ಸುಮಾರು 2 ಕಿ.ಮೀಗಳಷ್ಟು ದೂರದಲ್ಲಿ ಗುಡ್ಡದ ಪಕ್ಕದಲ್ಲಿದೆ. ಹೀಗಾಗಿ ಇಲ್ಲಿ ಜನದಟ್ಟಣೆ ಕಡಿಮೆಯಾಗಿದ್ದು ಯಾರೂ ಇತ್ತ ಸುಳಿಯಲ್ಲ. ಅಲ್ಲದೇ ಸುಮಾರು ನಾಲ್ಕು ವರ್ಷಗಳಿಂದ ಮಳೆಯಾಗಿಲ್ಲ ಅಂತ ಈ ರೈತರು ಅವರ 3 ಎಕರೆ 24 ಗುಂಟೆ ಜಮೀನಿನಲ್ಲಿ ಉಳುಮೆ ಮಾಡಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಬೆಂಬಲಿಗರು ಹಾಗೂ ಕಾಂಟ್ರ್ಯಾಕ್ಟರ್ ಆದ ಪ್ರಕಾಶ್ ಮತ್ತು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ನಾಗರಾಜು ಶಾಮೀಲಾಗಿ ರೈತರ ಅನುಮತಿ ಪಡೆಯದೆಯೇ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಟೆಂಡರ್ ಹಾಕಿ, ದೌರ್ಜನ್ಯದಿಂದ ಚೆಕ್ ಡ್ಯಾಂ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಜಯ್ಯಮ್ಮನವರ ಮಗ ಪ್ರಸನ್ನ ಆರೋಪಿಸಿದ್ದಾರೆ.

CTD 5

ಇದರಿಂದಾಗಿ ನೊಂದ ರೈತರು ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಸಹ ಪ್ರಯೋಜನವಾಗಿಲ್ಲ. ಅಲ್ಲದೇ ರೈತರ ಮೇಲೆಯೇ ಪೊಲಿಸರು ಹಾಗೂ ಗುತ್ತಿಗೆದಾರ ಪ್ರಕಾಶ್ ದೌರ್ಜನ್ಯವೆಸಗಿದ್ದು, ಅರ್ಧ ಎಕರೆ ಜಮೀನು ಬಿಟ್ಟುಕೊಡುವಂತೆ ಧಮ್ಕಿ ಹಾಕಿದ್ದಾರೆ. ಸುಮಾರು 50 ಲಾರಿ ಲೋಡ್ ನಷ್ಟು ಫಲವತ್ತಾದ ಮಣ್ಣನ್ನು ಭೂಮಿಯಿಂದ ತೆಗೆದಿದ್ದಾರೆ. ಹೀಗಾಗಿ ಮನನೊಂದ ರೈತ ಮಹಿಳೆ ಜಯ್ಯಮ್ಮ ನ್ಯಾಯ ಒದಗಿಸುವಂತೆ ಅಂಗಲಾಚಿದ್ದರು ಸಹ ಯಾರಿಂದಲೂ ನ್ಯಾಯ ಸಿಕ್ಕಿಲ್ಲ.

CTD 1

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಟ್ರ್ಯಾಕ್ಟರ್ ಪ್ರಕಾಶ್, ಈ ಕಾಮಗಾರಿಯಲ್ಲಿ ನಮ್ಮ ಪಾತ್ರವಿಲ್ಲ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸೂಚಿಸಿದ ಕಡೆ ಕಾಮಗಾರಿ ಆರಂಭಿಸಿದ್ದೇವೆ. ರೈತರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಮಗಾರಿ ನಿಲ್ಲಿಸಿದ್ದೇವೆ. ರೈತರಿಗಾದ ಅನ್ಯಾಯಕ್ಕೂ ನಮಗೂ ಸಂಬಂಧವಿಲ್ಲ. ಅಲ್ಲದೇ ಈ ರೈತರಿಗೆ ಆದ ಅನ್ಯಾಯಕ್ಕೆ ಪರಿಹಾರವನ್ನು ಎಂಜಿನಿಯರ್ ಪೂರೈಸುತ್ತಾರೆಂದು ಜಾರಿಕೊಂಡಿದ್ದಾರೆ. ಹಾಗೆಯೇ ಎಂಜಿನಿಯರ್ ನಾಗರಾಜ್ ಸಹ ರೈತರಿಗಾದ ಅನ್ಯಾಯವನ್ನು ಸರಿಪಡಿಸಲು ಕಾಂಟ್ರ್ಯಾಕ್ಟರ್ ಗೆ ಸೂಚಿಸಿದ್ದೇವೆ ಅಂತ ಹೇಳುತ್ತಾ, ಒಬ್ಬೊರ ಮೇಲೊಬ್ಬರು ಹೇಳಿಕೊಂಡು ಓಡಾಡ್ತಿದ್ದಾರೆ. ಇದರಿಂದಾಗಿ ಇದ್ದ ಅಂಗೈ ಅಗಲದಷ್ಟು ಜಮೀನಿನಲ್ಲಿ ಅರ್ಧಎಕರೆ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿ ರೈತ ಮಹಿಳೆ ಜಯ್ಯಮ್ಮ ಕಣ್ಣೀರಿಡುವಂತಾಗಿದೆ.

CTD 3

ಈ ಹಿಂದೆಯೂ ಸರ್ಕಾರದ ಹಣವನ್ನು ನುಂಗಲು ಅನಾಮಧೇಯ ಸ್ಥಳಗಳಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಚಿತ್ರದುರ್ಗ ಶಾಸಕರ ಬೆಂಬಲಿಗರು ಶಾಮೀಲಾಗಿ ಕಾಮಗಾರಿ ಮಾಡ್ತಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಅಂತಹ ಪ್ರಕರಣಗಳಿಗೆ ಈ ಅಕ್ರಮ ಕಾಮಗಾರಿ ಸಾಕ್ಷಿ ಎನಿಸಿದೆ. ಆದರೆ ಸರ್ಕಾರದ ಹಣ ನುಂಗಲು, ಈ ಖತರ್ನಾಕ್ ಅಸಾಮಿಗಳು ಅಮಾಯಕ ರೈತರ ಜಮೀನಿನನ್ನು ಹಾಳು ಮಾಡಿರೋದು ಮಾತ್ರ ವಿಪರ್ಯಾಸವೇಸರಿ.

CTD 2

Share This Article
Leave a Comment

Leave a Reply

Your email address will not be published. Required fields are marked *