ಕೇಂದ್ರದ ವಿರುದ್ಧ ಚಾಟಿ ಬೀಸಿದ್ದ ಜಡ್ಜ್ ವರ್ಗಾವಣೆ – ವಿಪಕ್ಷಗಳ ಆರೋಪ ಏನು? ಸರ್ಕಾರದ ಸ್ಪಷ್ಟನೆ ಏನು?

Public TV
3 Min Read
justice muralidhar rao delhi

ನವದೆಹಲಿ: ರಾಜಧಾನಿಯಲ್ಲಿನ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿ ಕಠಿಣ ಕ್ರಮಗಳಿಗೆ ಸೂಚಿಸಿದ್ದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವರ್ಗಾವಣೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೆಹಲಿ ಗಲಭೆ ಪ್ರಕರಣದ ತುರ್ತು ಅರ್ಜಿ ವಿಚಾರಣೆಯನ್ನು ಮಂಗಳವಾರ ರಾತ್ರಿ ವಿಚಾರಣೆ ನಡೆಸಿದ್ದ ಮುರಳೀಧರ್ ರಾವ್ ಬುಧವಾರವೂ ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭದಲ್ಲಿ 1984 ಪರಿಸ್ಥಿತಿ ಮರುಕಳಿಸದಿರಲಿ ಎಂದು ಕಳವಳ ವ್ಯಕ್ತಪಡಿಸಿ ಕೇಂದ್ರ ಹಾಗೂ ದೆಹಲಿಯ ಆಪ್ ಸರ್ಕರಕ್ಕೆ ಬಿಸಿ ಮುಟ್ಟಿಸಿದ್ದರು.

delhi violence 1

ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ದಿನವೇ ಮುರಳೀಧರ್ ಅವರನ್ನು ಬುಧವಾರ ರಾತ್ರಿ ಪಂಜಾಬ್ – ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಿಢೀರ್ ಆಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈ ವಿಚಾರ ಈಗ ರಾಜಕೀಯ ಆರೋಪ, ಪ್ರತ್ಯೋರಪಕ್ಕೆ ಕಾರಣವಾಗಿದೆ.

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರ ಹೇಳೋದು ಏನು?
ವರ್ಗಾವಣೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಆಧರಿಸಿ ವರ್ಗಾವಣೆ ನಡೆದಿದೆ. ಫೆಬ್ರವರಿ 12ರಂದೇ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಈ ವರ್ಗಾವಣೆಗೆ ಮುರಳೀಧರ್ ರಾವ್ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಚಾಟಿ ಬೀಸಿದ್ದು ಹೇಗೆ?
ದೆಹಲಿ ಗಲಭೆ ಸಂಬಂಧ ಎಸ್‍ಐಟಿ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾ. ಎಸ್ ಮುರಳೀಧರ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಬುಧವಾರ ನಡೆದಿತ್ತು. ಈ ವೇಳೆ ಈ ದೇಶದಲ್ಲಿ ಮತ್ತೂಂದು 1984ರ ಮಾದರಿ ಘಟನೆ ನಡೆಯಲು ನಾವು ಬಿಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

delhi violence

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಕಪಿಲ್ ಮಿಶ್ರಾ ಅವರ ಹೇಳಿಕೆಯ ವೀಡಿಯೋ ನೋಡಿದ್ದೀರಾ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ದಿಲ್ಲಿ ಡಿಸಿಪಿ ರಾಜೇಶ್ ದೇವ್ ಅವರನ್ನು ಕೋರ್ಟ್ ಪ್ರಶ್ನಿಸಿತ್ತು. ಅದಕ್ಕೆ ಅವರು, ನಾವು ಅಂಥ ವೀಡಿಯೋ ವೀಕ್ಷಿಸಿಲ್ಲ ಎಂದು ಉತ್ತರಿಸಿದ್ದರು.

ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗುತ್ತಿರುವ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ತುಣುಕುಗಳನ್ನು ಸಹ ಕೋರ್ಟ್‍ನಲ್ಲಿ ಮುರಳೀಧರ್ ರಾವ್ ಪ್ಲೇ ಮಾಡಿಸಿದ್ದರು.

delhi high court

ಇದು ನಿಜವಾಗಿಯೂ ಕಳವಳಕಾರಿ ಸಂಗತಿಯಾಗಿದ್ದು, ನಿಮ್ಮ ಕಚೇರಿಯಲ್ಲಿ ಹಲವು ಟಿವಿಗಳಿವೆ. ಹೀಗಿದ್ದರೂ ಪೊಲೀಸ್ ಅಧಿಕಾರಿ ನಾನು ವಿಡಿಯೋಗಳನ್ನು ವೀಕ್ಷಿಸಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ದೆಹಲಿ ಪೊಲೀಸರ ಸ್ಥಿತಿಗತಿಗಳಿಂದ ನಾನು ನಿಜವಾಗಿಯೂ ದಿಗಿಲುಗೊಂಡಿದ್ದೇನೆ ಎಂದು ನ್ಯಾ. ಮುರಳೀಧರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡುವವರ ಮೇಲೆ ಎಫ್‍ಐಆರ್ ಹಾಕುವ ನೀವು ಇಂಥ ಹೇಳಿಕೆ ನೀಡುವ ಇವರ ಮೇಲೆ ಕೇಸ್ ಹಾಕುವುದಿಲ್ಲ ಯಾಕೆ? ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಿಲ್ಲವೇ ಎಂದು ಖಡಕ್ ಆಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

DELHI ELECTION

ಸಾಮಾಜಿಕ ಜಾಲತಾಣದಲ್ಲಿ ಟೀಕೆ:
ನ್ಯಾ. ಮುರಳೀಧರ್ ವರ್ಗಾವಣೆಯಾಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿ ಹಲವು ವಿಪಕ್ಷ ನಾಯಕರಿಂದ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾ ಲೋಯಾ ವರ್ಗಾವಣೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನ್ಯಾಯಾಧೀಶರು ವರ್ಗಾವಣೆಯಾದಾಗ ಹತ್ತು ದಿನಗಳ ಕಾಲಾವಕಾಶ ನೀಡಬೇಕು. ನ್ಯಾ. ಮುರಳೀಧರ್ ಅವರ ಪ್ರಕರಣದಲ್ಲಿ ತತಕ್ಷಣಕ್ಕೆ ಬರುವಂತೆ ಆದೇಶ ಹೊರಡಿಸಲಾಗಿದೆ. ಕೊಲಿಜಿಯಂ ನ್ಯಾ. ಮುರುಳೀಧರ್ ಜೊತೆ ಇನ್ನು ಇಬ್ಬರನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ. ಆ ಇಬ್ಬರು ನ್ಯಾಯಾಧೀಶರನ್ನು ಯಾಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರವಿಶಂಕರ್ ಪ್ರಸಾದ್, ಭಾರತ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡಿ ಹಾಳು ಮಾಡಿರುವುದು ಕಾಂಗ್ರೆಸ್ ಹೊರತು ನಾವಲ್ಲ. ನ್ಯಾ. ಲೋಯಾ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಿದೆ. ಕಾಂಗ್ರೆಸ್ ನಿರಂತರವಾಗಿ ಕೋರ್ಟ್, ಸೇನೆ, ಸಿಎಜಿ(ಮಹಾಲೇಖಪಾಲರು), ಪ್ರಧಾನಿ ಮತ್ತು ಭಾರತದ ಜನರ ಮೇಲೆ ದಾಳಿ ನಡೆಸುತ್ತಿದೆ ಎಂದಿದ್ದಾರೆ.

ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ನಮಗೆ ಗೌರವವಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ನ್ಯಾಯಾಂಗವನ್ನು ಸೂಪರ್ ಸೀಡ್ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅವರ ಪರವಾಗಿ ತೀರ್ಪುಗಳು ಬಂದರೆ ಮಾತ್ರ ಅವರಿಗೆ ಇಷ್ಟವಾಗುತ್ತದೆ. ವಿರುದ್ಧವಾಗಿ ಬಂದರೆ ಸಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಪ್ರಶ್ನೆ ಕೇಳುತ್ತದೆ ಎಂದು ಟೀಕಿಸಿ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *